ಗಂಡ-ಹೆಂಡತಿ ಟೊಮೆಟೋ ಜಗಳ ಅರ್ಧ ಕೆಜಿ ಟೊಮೆಟೋದಿಂದ ಅಂತ್ಯ!
ಭೋಪಾಲ್: ಸಾಂಬಾರಿಗೆ 2 ಟೊಮೆಟೋ ಹಾಕಿದ್ದಕ್ಕೇ ಕೋಪಗೊಂಡು ಗಂಡನನ್ನು ಬಿಟ್ಟು ಮನೆ ಬಿಟ್ಟು ಹೋಗಿದ್ದ ಪತ್ನಿ ಕೊನೆಗೆ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿದ್ದಾರೆ.
ಹೌದು.. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ಪೊಲೀಸರ ಸಂಧಾನದಿಂದ ಸುಖಾಂತ್ಯ ಕಂಡಿದ್ದು, ಅರ್ಧ ಕೆಜಿ ಟೊಮೋಟೋ ಮೂಲಕ ಪತಿ-ಪತ್ನಿ ಇಬ್ಬರನ್ನೂ ಒಂದು ಗೂಡಿಸಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊವನ್ನು ತನ್ನನ್ನು ಕೇಳದೇ ಸಾಂಬಾರಿನಲ್ಲಿ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ನಡೆದಿತ್ತು. ಮೂಲಗಳ ಪ್ರಕಾರ ಸಂಜೀವ್ ಬರ್ಮನ್ ದಂಪತಿ ಶಾಹದೋಲ್‌ನಲ್ಲಿ ಸಣ್ಣ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ಟೊಮೆಟೊ ತರಕಾರಿಗಳ ಬೆಲೆ ಏರಿಕೆಯಿಂದ ಪರಿಸ್ಥಿತಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಸಂಜೀವ್ ಬರ್ಮನ್ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡೇ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಪತ್ನಿ ಪತಿಯೊಂದಿಗೆ ಜಗಳ ತೆಗೆದಿದ್ದಾರೆ.
ಸಂಜೀವ್ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ. ಟೊಮೆಟೊದಿಂದ ಆರಂಭವಾದ ಸಣ್ಣ ಜಗಳ ಅತಿರೇಕಕ್ಕೆ ಹೋಗಿದ್ದು, ಕೊನೆಗೆ ಸಂಜೀವ್ ಬರ್ಮನ್ ಪತ್ನಿ, ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್ ಬರ್ಮನ್ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದೀಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಶೋಧ ನಡೆಸಿ ಕೊನೆಗೆ ಆಕೆಯ ಸಹೋದರಿ ಮೂಲಕ ಆಕೆಯನ್ನು ಸಂಪರ್ಕಿಸಿ ಧನಪುರಿ ಪೊಲೀಸ್ ಠಾಣೆಗೆ ಕರೆಸಿ ಸಂಧಾನ ನಡೆಸಿದ್ದಾರೆ. ಈ ವೇಳೆ ಪತಿ ಅರ್ಧಕೆಜಿ ಟೊಮೆಟೋವನ್ನು ಪತ್ನಿಗೆ ನೀಡಿ ಮುಂದೆ ಇಂತಹ ತಪ್ಪುಗಳಾಗುವುದಿಲ್ಲ ಎಂದು ಕೇಳಿಕೊಂಡ ಬಳಿಕ ಮತ್ತೆ ಮನೆಗೆ ಬರಲು ಪತ್ನಿ ಒಪ್ಪಿಕೊಂಡಿದ್ದಾರೆ. ಪತಿ ಕೂಡ ಟೊಮೆಟೋ ಬೆಲೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಯಾವುದೇ ಅಡುಗೆಯಲ್ಲಿ ಟೊಮೆಟೊಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಮನಗೆ ಕರೆದೊಯ್ದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ