ಭಾರತ-ಶ್ರೀಲಂಕಾ ಮಾತುಕತೆ: ಭೂ ಸಂಪರ್ಕ, ತೈಲ, ತಮಿಳು ಜನರ ವಿಷಯ ಪ್ರಮುಖ ಅಂಶಗಳು
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ- ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ತೈಲ ಪೈಪ್ ಲೈನ್, ಫೆರ್ರಿ ಕನೆಕ್ಟಿವಿಟಿ, ಯುಪಿಐ, ರೂಪಾಯಿಯ ಮೂಲಕ ವ್ಯಾಪಾರ, ಭೂ ಸಂಪರ್ಕ ಸಾಧ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ನವದೆಹಲಿಗೆ ಆಗಮಿಸಿದ್ದು, ಇದು ಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಬಳಿಕ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಮೊದಲ ಭೇಟಿಯಾಗಿದೆ.
ನಮ್ಮ ಆರ್ಥಿಕ ಪಾಲುದಾರಿಕೆಗಾಗಿ ನಾವು ಇಂದು ವಿಷನ್ ಡಾಕ್ಯುಮೆಂಟ್ ನ್ನು ಅಳವಡಿಸಿಕೊಂಡಿದ್ದೇವೆ. ಎರಡೂ ದೇಶಗಳ ಸಮುದ್ರ, ವಾಯು ಕ್ಷೇತ್ರ, ಇಂಧನ, ಜನರ ನಡುವಿನ ಪರಸ್ಪರ ಸಂಪರ್ಕಗಳ ಬಲವರ್ಧನೆ ನಮ್ಮ ಗುರಿಯಾಗಿದೆ. ಪ್ರವಾಸೋದ್ಯಮ, ವಿದ್ಯುತ್, ವ್ಯಾಪಾರ-ವಹಿವಾಟು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿಯಲ್ಲಿ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಇದು ಶ್ರೀಲಂಕಾದೆಡೆಗೆ ಭಾರತದ ದೀರ್ಘಾವಧಿ ಬದ್ಧತೆಯ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತವು ತನ್ನ ನೆರೆ ರಾಷ್ಟ್ರಕ್ಕೆ ಆಹಾರ, ಔಷಧ ಮತ್ತು ಇಂಧನ ಸೇರಿದಂತೆ USD 4 ಶತಕೋಟಿ ಮೌಲ್ಯದ ನಿರ್ಣಾಯಕ ಆರ್ಥಿಕ ಮತ್ತು ಮಾನವೀಯ ಸಹಾಯವನ್ನು ಒದಗಿಸಿದೆ. ಲಂಕಾ 83 ಶತಕೋಟಿ ಯುಎಸ್ ಡಾಲರ್ ಗಿಂತಲೂ ಹೆಚ್ಚಿನ ಮೊತ್ತದ ಒಟ್ಟು ಸಾಲ ಎದುರಿಸುತ್ತಿದ್ದು, ಹೆಚ್ಚು ಅಗತ್ಯವಿರುವ ಸ್ಥಿರತೆಯನ್ನು ನೀಡುವ ಗುರಿಯನ್ನು ಹೊಂದಿದೆ. ಇದಕ್ಕೂ ಮುನ್ನ ಲಂಕಾದ ಅಧ್ಯಕ್ಷರು ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಅವರೊಂದಿಗೆ ಮಾತುಕತೆ ನಡೆಸಿ ಬಂದರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದರು.
"ನಾವು ಕೊಲಂಬೊ ಪೋರ್ಟ್ ವೆಸ್ಟ್ ಕಂಟೈನರ್ ಟರ್ಮಿನಲ್ ಅಭಿವೃದ್ಧಿ ಮುಂದುವರೆಸುವುದು, 500 MW ಪವನ ವಿದ್ಯುತ್ ಯೋಜನೆ ಮತ್ತು ಹಸಿರು ಹೈಡ್ರೋಜನ್ ಉತ್ಪಾದಿಸಲು ನಮ್ಮ ನವೀಕರಣ ಶಕ್ತಿ ಪರಿಣತಿಯನ್ನು ವಿಸ್ತರಿಸುವುದರ ಬಗ್ಗೆ ಚರ್ಚೆ ನಡೆಸಿದ್ದೇವೆ," ಎಂದು ಸಭೆಯ ನಂತರ ಅದಾನಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ