ಮಣಿಪುರ ಹಿಂಸಾಚಾರ: ಸ್ವಾತಂತ್ರ್ಯ ಹೋರಾಟಗಾರರ ವೃದ್ಧ ಪತ್ನಿ ಸಜೀವ ದಹನ
ಇಂಫಾಲ: ಮಣಿಪುರ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಭೀಕರ ಘಟನೆಗಳ ಸರಮಾಲೆ ಒಂದೊಂದಾಗಿ ನಿಧಾನವಾಗಿ ಬಯಲಾಗುತ್ತಿದ್ದು, ಇದೀಗ ಹಿಂಸಾಚಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೃದ್ಧ ಪತ್ನಿಯನ್ನು ಸಜೀವ ದಹನ ಮಾಡಿದ ಧಾರುಣ ಘಟನೆ ಕೂಡ ಬೆಳಕಿಗೆ ಬಂದಿದೆ.
ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದೆ ಎಂಬುದು ಇದೀಗ ಬಹಿರಂಗವಾಗಿದ್ದು, ಈ ಬಗ್ಗೆ ಸೆರೌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ರಾಜಧಾನಿ ಇಂಫಾಲ್‌ನಿಂದ ಸುಮಾರು 45 ಕಿಮೀ ದೂರದಲ್ಲಿರುವ ಸೆರೌ ಗ್ರಾಮದಲ್ಲಿ ಮೇ 28ರಂದು ಈ ಘಟನೆ ನಡೆದಿದ್ದು, ಸುಮಾರು 80 ವರ್ಷದ ಇಬೆತೊಂಬಿ ಮನೆಯೊಳಗೆ ಇದ್ದಾಗ ದಾಳಿಕೋರರು ಹೊರಗಿನಿಂದ ಬೀಗ ಹಾಕಿ ಆನಂತರ ಇಡೀ ಮನೆಗೆ ಬೆಂಕಿ ಹಚ್ಚಲಾಗಿದೆ.
ಕುಟುಂಬದವರು ರಕ್ಷಿಸಲು ಬರುವಷ್ಟರಲ್ಲಿ ಬೆಂಕಿಯು ಸಂಪೂರ್ಣ ಮನೆಯನ್ನು ಆವರಿಸಿದ್ದು, ನಂತರ ಇಬೆಟೊಂಬಿಯು ಸಜೀವವಾಗಿ ಸುಟ್ಟು ಕರಕಲಾಗಿದ್ದರು ಎಂದು ಅವರು ಕುಟುಂಬದವರು ಹೇಳಿದ್ದಾರೆ. ಈ ಮಹಿಳೆಯ ಪತಿ ಎಸ್ ಚುರಚಂದ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಗೌರವಿಸಿದ್ದರು ಎಂದು ಹೇಳಲಾಗಿದೆ.
ಮೊದಲು ಇಲ್ಲಿಂದ ಹೋಗಿ ಮತ್ತೆ ಬಾ ಎಂದಿದ್ದ ಅಜ್ಜಿ
ಇನ್ನು ಘಟನೆಗೆ ಸಂಬಂಧಿಸಿದಂತೆ ಎನ್ ಡಿಟಿವಿ ಸುದೀರ್ಘ ವರದಿ ಮಾಡಿದ್ದು, ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವೃದ್ದೆಯ ಮೊಮ್ಮಗ 22 ವರ್ಷದ ಪ್ರೇಮಕಾಂತ ಅವರು ಅವರು ದುಷ್ಕರ್ಮಿಗಳು ಅಜ್ಜಿ ಮನೆಗೆ ಬೆಂಕಿ ಹಚ್ಚಿದಾಗ ನಾವು ಅವರನ್ನು ರಕ್ಷಿಸಲು ಮುಂದಾದೆವು. ಆದರೆ ದುಷ್ಕರ್ಮಿಗಳು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು.
ಕೂದಲೆಳೆ ಅಂತರದಲ್ಲಿ ನಾವು ಪ್ರಾಣಾಪಾಯದಿಂದ ಪಾರಾದೆವು. ಈ ವೇಳೆ ನನ್ನ ತೋಳು ಮತ್ತು ತೊಡೆಗೆ ಗುಂಡಿನ ಗಾಯವಾಗಿತ್ತು. ಹೀಗಾಗಿ ಅಜ್ಜಿ ಒಳಗಿನಿಂದಲೇ ಮೊದಲು ಇಲ್ಲಿಂದ ಹೋಗು.. ಆ ಮೇಲೆ ಬಾ ಎಂದು ಹೇಳಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ನನ್ನ ಅಜ್ಜಿ ಸಜೀವ ಗಹನವಾಗಿದ್ದರು ಎಂದು ಪ್ರೇಮಕಾಂತ ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ