ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ದೇಶ ಈ ಮೊದಲೇ ಅವರಿಗೆ ಪಾಠ ಕಲಿಸಿದೆ; ವಿಪಕ್ಷಗಳ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕಿಡಿಕಾರಿದ್ದಾರೆ.
ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 2019 ಕ್ಕೂ ಮೊದಲು ಇದೇ ರೀತಿಯ ವರ್ತನೆ ತೋರಿದ್ದರು. ನಂತರದ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸಿದರು ಎಂದು ವ್ಯಂಗ್ಯವಾಡಿದರು.
ಜನರಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಮೇಲೆ ವಿಶ್ವಾಸವಿದೆ, ಪ್ರತಿಪಕ್ಷದ ನಾಯಕರು ಈ ಹಿಂದೆಯೂ (2019 ರ ಲೋಕಸಭಾ ಚುನಾವಣೆಗೂ ಮುನ್ನ) ಇದೇ ರೀತಿಯ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಾತನಾಡಿ, ಯಾವುದೇ ಪರಿಸ್ಥಿತಿಗೆ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.
ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ. ಯಾವುದೇ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಿದೆ. ಮಣಿಪುರದ ಕುರಿತು ನಾವೂ ಚರ್ಚೆಯನ್ನು ಬಯಸಿದ್ದೆವು. ಸಂಸತ್ತಿನ ಅಧಿವೇಶನಕ್ಕೂ ಮುನ್ನ ಮಣಿಪುರ ಪರಿಸ್ಥಿತಿ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಆಗ್ರಹಿಸಿದ್ದರು. ನಾವು ಚರ್ಚೆಗೆ ಸಮ್ಮತಿಸಿದ ಬಳಿಕ ಸಂಸತ್ತಿನಲ್ಲಿ ಕಲಾಪಕ್ಕೆ ಅಡ್ಡಿಪಡಿಸಲು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ