ಚಿತ್ತೂರು: ಟೊಮೆಟೊ ಮಾರಾಟದಿಂದ ಕೋಟ್ಯಾಧಿಪತಿಯಾದ ರೈತ!

ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವಂತೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ತಾವು ಕೆಂಪು ಸುಂದರಿ ಮಾರಾಟದಿಂದ ಕೋಟ್ಯಾಧಿಪತಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ರೈತ ಚಂದ್ರಮೌಳಿ
ರೈತ ಚಂದ್ರಮೌಳಿ
Updated on

ಚಿತ್ತೂರು: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವಂತೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ತಾವು ಕೆಂಪು ಸುಂದರಿ ಮಾರಾಟದಿಂದ ಕೋಟ್ಯಾಧಿಪತಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ 22 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 3 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಕರಕಮಂಡ ಗ್ರಾಮದ ರೈತ ಚಂದ್ರಮೌಳಿ ಹೇಳಿದ್ದಾರೆ.

10 ಲಕ್ಷ ರೂಪಾಯಿ ಸಾಗಾಣಿಕೆ ಮತ್ತಿತರ ಕಾರಣಗಳಿಂದ ಖರ್ಚಾಗಿದ್ದು, 20 ಲಕ್ಷ ರೂಪಾಯಿ ಕಮಿಷನ್‌ಗೆ ಹೋಗಿದೆ. ಎಲ್ಲಾ ಕಳೆದು  3 ಕೋಟಿ ರೂಪಾಯಿ ನಿವ್ವಳ ಆದಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಟೊಮೆಟೊ ಬೆಳೆಯಲ್ಲಿ ಹಲವು ಬಾರಿ ನಷ್ಟ ಉಂಟಾಗಿದ್ದರೂ ಬೇಸಿಗೆ ನಂತರ ಬರುವ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬುದನ್ನು ಅರಿತ ಕುಟುಂಬ ಈ ಬಾರಿ ಟೊಮೆಟೊ ಬೆಳೆದು ಬಂಪರ್ ಆದಾಯ ಗಳಿಸಿದೆ.

ಇವರು ಏಪ್ರಿಲ್ 7 ರಂದು 22 ಎಕರೆ ಪ್ರದೇಶದಲ್ಲಿ ಸಾಹು ತಳಿಯ ಟೊಮೆಟೊ ನಾಟಿ ಮಾಡಿದ್ದು, ಸೂಕ್ಷ್ಮ ನೀರಾವರಿ ಪದ್ಧತಿ ಅನುಸರಣೆಯೊಂದಿಗೆ ಜೂನ್ ಅಂತ್ಯದಲ್ಲಿ ಇಳುವರಿ ಪಡೆದಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಹರಾಜಿನಲ್ಲಿ 15 ಕೆಜಿ ತೂಕದ ಬಾಕ್ಸ್‌ನ ಬೆಲೆ 1,000 ರಿಂದ 1,500 ರೂ.ವರೆಗೆ ಇದ್ದು, ಸುಮಾರು 40,000 ಬಾಕ್ಸ್‌ಗಳು ಮಾರಾಟವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ತೀವ್ರ ಏರಿಕೆಯ ನಡುವೆ NCCF ಮತ್ತು NAFED  ನಂತಹ ಏಜೆನ್ಸಿಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮ್ಯಾಟೊ ಖರೀದಿಯನ್ನು ಪ್ರಾರಂಭಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com