ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ತಿಹಾರ್ ಜೈಲಿನಿಂದ ಮನೆಗೆ ಬಂದ ಮನೀಶ್ ಸಿಸೋಡಿಯಾ!

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ತಿಹಾರ್ ಜೈಲಿನಿಂದ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ತಮ್ಮ ನಿವಾಸಕ್ಕೆ ಆಗಮಿಸಿದರು. 
ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ತಿಹಾರ್ ಜೈಲಿನಿಂದ ತಮ್ಮ ನಿವಾಸಕ್ಕೆ ಆಗಮಿಸಿದ ಮನೀಶ್ ಸಿಸೋಡಿಯಾ
ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ತಿಹಾರ್ ಜೈಲಿನಿಂದ ತಮ್ಮ ನಿವಾಸಕ್ಕೆ ಆಗಮಿಸಿದ ಮನೀಶ್ ಸಿಸೋಡಿಯಾ

ನವೆದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ತಿಹಾರ್ ಜೈಲಿನಿಂದ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ತಮ್ಮ ನಿವಾಸಕ್ಕೆ ಆಗಮಿಸಿದರು. ಆಪ್ ನಾಯಕನ ಆಗಮನದ ಮೊದಲು ಪತ್ನಿಯ ಆರೋಗ್ಯ ಹದಗೆಟ್ಟ ಕಾರಣದಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎಎಪಿ ಮೂಲಗಳ ಪ್ರಕಾರ, ಸಿಸೋಡಿಯಾ ಅವರ ಪತ್ನಿ ಸೀಮಾ ಅವರು ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆ ಮಲ್ಟಿಪಲ್ ಸ್ಕ್ಲೆರೋಸಿಸ್‌ನಿಂದ ಬಳಲುತ್ತಿದ್ದು, ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು.

ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಎಎಪಿ ನಾಯಕನಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಅನುಮತಿ ನೀಡಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ತಿಹಾರ್ ಜೈಲು ಅಧೀಕ್ಷಕರಿಗೆ ಸಿಸೋಡಿಯಾ ಅವರನ್ನು ತಮ್ಮ ನಿವಾಸಕ್ಕೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ಅವರು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಿದ್ದಾರೆ.

ಸಿಸೋಡಿಯಾ ಅವರನ್ನು ಬೆಳಗ್ಗೆ 9 ಗಂಟೆ ಸುಮಾರಿಗೆ ಭದ್ರತೆಯಲ್ಲಿ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಅವರು ಸಂಜೆ 5 ಗಂಟೆಗೆ ಮತ್ತೆ ಜೈಲಿಗೆ ಹಿಂತಿರುಗಬೇಕು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಅವರ ಪಾತ್ರಕ್ಕಾಗಿ ಫೆಬ್ರುವರಿ 26 ರಂದು ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತು ಮತ್ತು ಅಂದಿನಿಂದ ಅವರು ಜೈಲಿನಲ್ಲಿದ್ದಾರೆ.

ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಮೇ 30 ರಂದು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.

ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ ಪ್ರಕರಣದಲ್ಲಿ ಅವರನ್ನು ಮಾರ್ಚ್ 9 ರಂದು ಬಂಧಿಸಲಾಯಿತು ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಿಸೋಡಿಯಾ ಅವರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಮಾಧ್ಯಮ ಅಥವಾ ಇತರ ಯಾವುದೇ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಬಾರದು ಮತ್ತು ಫೋನ್ ಅಥವಾ ಇಂಟರ್ನೆಟ್ ಅನ್ನು ಬಳಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com