ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 275; ಕೇಂದ್ರ ಸರ್ಕಾರ ಮಾಹಿತಿ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿದ್ದು, ಸಾವಿನ ಸಂಖ್ಯೆ 275 ಎಂದು ಮಾಹಿತಿ ತಿಳಿಸಿದೆ.
ಒಡಿಶಾ ರೈಲು ದುರಂತದ ಚಿತ್ರ
ಒಡಿಶಾ ರೈಲು ದುರಂತದ ಚಿತ್ರ

ಭುವನೇಶ್ವರ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿದ್ದು, ಸಾವಿನ ಸಂಖ್ಯೆ 275 ಎಂದು ಮಾಹಿತಿ ತಿಳಿಸಿದೆ.

ಬಾಲಸೋರ್‌ನಲ್ಲಿ ನಡೆದ ದುರಂತ ರೈಲು ಅಪಘಾತ ಸಂಭವಿಸಿದ 2 ದಿನಗಳ ನಂತರ, ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಭಾನುವಾರ, ಸಾವಿನ ಸಂಖ್ಯೆ ಕುರಿತಂತೆ ಮಾಹಿತಿ ನೀಡಿದ್ದಾರೆ. ಮೃತ ದೇಹಗಳ ಎಣಿಕೆ ವೇಳೆ ಕೆಲವು ದೇಹಗಳನ್ನು ಎರಡೆರಡು ಬಾರಿ ಎಣಿಸಲಾಗಿದೆ. ಇದೀಗ ಇಂತಹ  'ಡಬಲ್ ಎಣಿಕೆ'ಗಳನ್ನು ಅಂಶೀಕರಿಸಿದ ನಂತರ ಘಟನೆಯಲ್ಲಿ ಸಾವಿನ ಸಂಖ್ಯೆಯನ್ನು 275ಕ್ಕೆ ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಸಾವಿನ ಸಂಖ್ಯೆ 288 ಎಂದು ಹೇಳಲಾಗಿತ್ತು. ಇದೀಗ ಈ ಸಂಖ್ಯೆಯನ್ನು 275ಕ್ಕೆ ಪರಿಷ್ಕರಣೆ ಮಾಡಲಾಗಿದೆ. 275ರಲ್ಲಿ 88 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಈ ಕುರಿತು ಮಾತನಾಡಿದ ಪ್ರದೀಪ್ ಜೆನಾ, "ಸಾವಿನ ಸಂಖ್ಯೆ 288 ಎಂದು ಶನಿವಾರ ರೈಲ್ವೇ ಹೇಳಿದೆ ಮತ್ತು ನಾವು ಅದನ್ನು ಪ್ರಸಾರ ಮಾಡಿದ್ದೇವೆ. ಆದರೆ, ಅಂದಿನಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅವರ ತಂಡವು ಪ್ರತಿ ದೇಹವನ್ನು ಟ್ರ್ಯಾಕ್‌ನಿಂದ, ಆಸ್ಪತ್ರೆ ಮತ್ತು ಎರಡು ತಾತ್ಕಾಲಿಕ ಅಸೆಂಬ್ಲಿ ಪಾಯಿಂಟ್‌ಗಳಲ್ಲಿ ಪರಿಶೀಲಿಸಿದೆ. ಈ ವೇಳೆ ಕೆಲವು ದೇಹಗಳನ್ನು ಎರಡು ಬಾರಿ ಎಣಿಕೆ ಮಾಡಿರುವುದು ಕಂಡುಬಂದಿದೆ. ಆದ್ದರಿಂದ ಮತ್ತೆ ಎಣಿಕೆ ಕಾರ್ಯ ಮಾಡಲಾಗಿದ್ದು, ಸಾವಿನ ಸಂಖ್ಯೆ 275 ಮತ್ತು 288 ಅಲ್ಲ 275 ಎಂಬುದು ಸ್ಪಷ್ಟವಾಗಿದೆ ಎಂದರು.

ಅಂತೆಯೇ ಭಾನುವಾರ ಬೆಳಗಿನ ಜಾವದವರೆಗೆ 78 ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. 10 ಮೃತದೇಹಗಳನ್ನು ಗುರುತಿಸಲಾಗಿದ್ದು, ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ದೇಹಗಳ ಪೈಕಿ 170 ಶವಗಳನ್ನು ಭುವನೇಶ್ವರಕ್ಕೆ ಶವಾಗಾರಗಳು ಮತ್ತು ಇತರ ಆಸ್ಪತ್ರೆಗಳಾದ ಏಮ್ಸ್, ಕ್ಯಾಪಿಟಲ್ ಆಸ್ಪತ್ರೆ, ಎಸ್‌ಯುಎಂ, ಕೆಐಎಂ ಮತ್ತು ಎಎಂಆರ್‌ಐ ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ಉಳಿದ ದೇಹಗಳನ್ನು ಸಹ ಅಲ್ಲಿಗೆ ಕಳುಹಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ 1,175 ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಭಾನುವಾರ ಬೆಳಿಗ್ಗೆ ತನಕ, ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 793 ಗಾಯಗೊಂಡ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ, 382 ಮಂದಿಯ ಚಿಕಿತ್ಸೆ ಮುಂದುವರೆದಿದೆ. ಈ ಅಂಕಿಅಂಶವನ್ನು ಮತ್ತೊಮ್ಮೆ ನವೀಕರಿಸಲಾಗುತ್ತದೆ. ಗುರುತಿಸದ ಶವಗಳ ಬಗ್ಗೆ, ನಾವು ಶವಗಳ ಛಾಯಾಚಿತ್ರಗಳನ್ನು ಹಾಕಿದ್ದೇವೆ ಮತ್ತು ಅವುಗಳನ್ನು ಮೂರು ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com