ಒಡಿಶಾ ತ್ರಿವಳಿ ರೈಲು ಅಪಘಾತದ ಹಿಂದೆ ಟಿಎಂಸಿ ಪಿತೂರಿ: ಮಮತಾ ವಿರುದ್ಧ ಸುವೆಂದು ಅಧಿಕಾರಿ ಕಿಡಿ

ಕನಿಷ್ಠ 275 ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸೋಮವಾರ ಆರೋಪಿಸಿದ್ದಾರೆ.
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ

ಕೊಲ್ಕೋತಾ: ಕನಿಷ್ಠ 275 ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸೋಮವಾರ ಆರೋಪಿಸಿದ್ದಾರೆ.

ಜೂನ್ 2 ರಂದು ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಅಪಘಾತ ನಡೆದಿತ್ತು.

ಒಡಿಶಾ ರೈಲು ದುರಂತದ ಹಿಂದೆ ಟಿಎಂಸಿಯ ಪಿತೂರಿ ಇದೆ. ಘಟನೆ ಬೇರೆ ರಾಜ್ಯದಲ್ಲಾಗಿದ್ದರು ಅವರು (ಮಮತಾ ಬ್ಯಾನರ್ಜಿ) ನಿನ್ನೆಯಿಂದ ಏಕೆ ಗಾಬರಿಗೊಂಡಿದ್ದಾರೆ. ಸಿಬಿಐ ತನಿಖೆಗೆ ಅವರೇಕೆ ಹೆದರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಟಿಎಂಸಿ ಪಕ್ಷದವರು ಪೊಲೀಸರ ನೆರವಿನೊಂದಿಗೆ ರೈಲ್ವೆ ಅಧಿಕಾರಿಗಳಿಬ್ಬರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಇಬ್ಬರು ರೈಲ್ವೆ ಅಧಿಕಾರಿಗಳ ನಡುವಿನ ಸಂಭಾಷಣೆ ಇವರಿಗೆ ಹೇಗೆ ಗೊತ್ತಾಯಿತು? ಸಂಭಾಷಣೆ ಹೇಗೆ ಸೋರಿಕೆಯಾಯಿತು ಎಂಬುದು ಸಿಬಿಐ ತನಿಖೆಯಿಂದ ಹೊರಬರಬೇಕಿದೆ. ಸತ್ಯಾಂಶ ತಿಳಿಯದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಟೀಕಿಸಿದ್ದರು. ನಾನು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಪ್ರಕರಣವನ್ನು ಸಿಬಿಐಗೆ ನೀಡಿದ್ದೇನೆ ಆದರೆ ಇದುವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. 12 ವರ್ಷ ಕಳೆದರೂ ಯಾವುದೇ ಫಲಿತಾಂಶ ಕಾಣುತ್ತಿಲ್ಲ ಎಂದಿದ್ದರು.

ಇನ್ನೂ ಬಾಲೇಶ್ವರ್‌ನಲ್ಲಿ ಸಂಭವಿಸಿದ ರೈಲು ದುರಂತ ಕುರಿತಂತೆ ಸಿಬಿಐ ಸೋಮವಾರ ತನಿಖೆ ಆರಂಭಿಸಿದೆ. 10 ಸದಸ್ಯರ ತಂಡ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು ಎಂದು ರೈಲ್ವೆ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com