"ಬ್ರಿಜ್ ಭೂಷಣ್ ಕುಡಿದು ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು": ಅಂತರರಾಷ್ಟ್ರೀಯ ರೆಫರಿ ಜಗ್ಬೀರ್
ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು 2013ರಿಂದ ಹಲವಾರು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು...
Published: 09th June 2023 07:22 PM | Last Updated: 17th August 2023 05:30 PM | A+A A-

ಬ್ರಿಜ್ ಭೂಷಣ್ ಸಿಂಗ್
ನವದೆಹಲಿ: ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು 2013ರಿಂದ ಹಲವಾರು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ರೆಫರಿ ಜಗ್‌ಬೀರ್ ಸಿಂಗ್ ಅವರು ಹೇಳಿದ್ದಾರೆ.
ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತ ಹಲವು ಅಗ್ರ ಕುಸ್ತಿಪಟುಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
"ನಾನು 2007 ರಿಂದ ಯುಡಬ್ಲ್ಯುಡಬ್ಲ್ಯೂ ರೆಫರಿ ಆಗಿದ್ದೇನೆ ಮತ್ತು ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸುವ ಮೊದಲೂ ನಾನು ರೆಫರಿಯಾಗಿದ್ದೇನೆ. ಬಹಳ ಹಿಂದಿನಿಂದಲೂ ನನಗೆ ಬ್ರಿಜ್ ಭೂಷಣ್ ಗೊತ್ತು" ಎಂದು ಜಗ್ಬೀರ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿ: 'WFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ದ ಸುಳ್ಳು ಪ್ರಕರಣ ದಾಖಲು'; ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್!
"ಬ್ರಿಜ್ ಭೂಷಣ್ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಆದರೆ ಹುಡುಗಿಯರು ಆತನ ವಿರುದ್ಧ ದೂರುಗಳನ್ನು ದಾಖಲಿಸುವವರೆಗೆ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆ ದೃಶ್ಯಗಳನ್ನು ನೋಡಿ ನನಗೆ ಬೇಸರವಾಯಿತು" ಎಂದು ಅವರು ಹೇಳಿದ್ದಾರೆ.
2007 ರಿಂದ ಕೋಚ್-ಕಮ್-ಇಂಟರ್ನ್ಯಾಷನಲ್ ರೆಫರಿ ಆಗಿರುವ ಜಗಬೀರ್ ಅವರು, ಬ್ರಿಜ್ ಭೂಷಣ್ ಅವರ ದುರ್ವರ್ತನೆಯನ್ನು ಹಲವಾರು ಸಂದರ್ಭಗಳಲ್ಲಿ ತಾವು ನೋಡಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ಕೇಂದ್ರ ಕ್ರೀಡಾ ಸಚಿವರೊಂದಿಗೆ ಸಭೆ; ಜೂನ್ 15 ರವರೆಗೆ ಪ್ರತಿಭಟನೆ ಹಿಂಪಡೆಯಲು ಕುಸ್ತಿಪಟುಗಳು ಒಪ್ಪಿಗೆ
ಬ್ರಿಜ್ ಭೂಷಣ್ ಅಧ್ಯಕ್ಷರಾದ ನಂತರ 2013 ರಲ್ಲಿ ಕಝಾಕಿಸ್ತಾನ್ ಪ್ರವಾಸದ ಸಂದರ್ಭದಲ್ಲಿ ಅವರು 'ನಾನು ನಿಮಗೆ ಇಂದು ಭಾರತೀಯ ಆಹಾರ ನೀಡುತ್ತೇನೆ' ಎಂದು ಹೇಳಿದರು ಮತ್ತು ಜೂನಿಯರ್ ಕುಸ್ತಿಪಟುಗಳ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದರು. ಈ ವೇಳೆ ಬ್ರಿಜ್ ಭೂಷಣ್ ಮತ್ತು ಆತನ ಸಹಚರರು ಕುಡಿದು ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಅದಕ್ಕೆ ನಾನೇ ಸಾಕ್ಷಿ ಎಂದು ರೆಫರಿ ಹೇಳಿದ್ದಾರೆ.