ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಮೂವರು ಸಾವು, ಇಬ್ಬರಿಗೆ ಗಾಯ
ಮಣಿಪುರದಲ್ಲಿ ಸ್ವಲ್ಪ ಸಮಯದ ನಂತರ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
Published: 09th June 2023 06:39 PM | Last Updated: 09th June 2023 07:40 PM | A+A A-

ಮಣಿಪುರ
ಗುವಾಹಟಿ: ಮಣಿಪುರದಲ್ಲಿ ಸ್ವಲ್ಪ ಸಮಯದ ನಂತರ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಇಂದು ಬೆಳಗಿನ ಜಾವ ಕಾಂಗ್‌ಪೋಕ್ಪಿ ಜಿಲ್ಲೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಗಡಿಯಲ್ಲಿರುವ ಖೋಕೆನ್ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ.
ಅಪರಿಚಿತ ಬಂದೂಕುಧಾರಿಗಳ ಗುಂಪು ಗ್ರಾಮದ ಮೇಲೆ ಗುಂಡಿನ ದಾಳಿ ನಡೆಸಿದಾಗ, ಸ್ಥಳೀಯರು ತಕ್ಷಣ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸೇನಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಸೇನೆ ಸ್ಥಳಕ್ಕೆ ಬರುವ ವೇಳೆಗೆ ಗುಂಡಿನ ದಾಳಿಯಲ್ಲಿ ಮೂವರು ಗ್ರಾಮಸ್ಥರನ್ನು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಜಂಗ್‌ಪಾವೊ ಟೌತಾಂಗ್, ಖೈಮಾಂಗ್ ಗೈಟ್ ಮತ್ತು ಡೊಮ್‌ಖೋಯ್(ಮಹಿಳೆ) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಥೋಂಗ್ನೆ ಮತ್ತು ತಂಗ್ಖೋಜಾಂಗ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಮಣಿಪುರ: ಬೈಕ್‌ನಲ್ಲಿ ಬಂದು ಶಾಸಕರ ನಿವಾಸದ ಮೇಲೆ ಬಾಂಬ್ ಎಸೆದ ಇಬ್ಬರು ದುಷ್ಕರ್ಮಿಗಳು
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ಐಟಿಎಲ್‌ಎಫ್) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
"ಜೂನ್ 9 ರ ಬೆಳಗ್ಗೆ ಸೇನಾ ಸಮವಸ್ತ್ರದ ಧರಿಸಿ ಮತ್ತು ಸೇನಾ ವಾಹನಗಳನ್ನು ಬಳಸಿ ಮೈಟೆಯ್ ಉಗ್ರಗಾಮಿಗಳು ಖೋಕೆನ್ ಗ್ರಾಮದ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಐಟಿಎಲ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂಸಾಚಾರದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆ ಗಾಯಾಳು ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ಇನ್ನೂ ಘಟನಾ ಸ್ಥಳವನ್ನು ತಲುಪಿಲ್ಲ"ಎಂದು ಅಧಿಕಾರಿ ಹೇಳಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.