ಮಣಿಪುರ: ಬೈಕ್‌ನಲ್ಲಿ ಬಂದು ಶಾಸಕರ ನಿವಾಸದ ಮೇಲೆ ಬಾಂಬ್ ಎಸೆದ ಇಬ್ಬರು ದುಷ್ಕರ್ಮಿಗಳು

ಗುರುವಾರ ಇಂಫಾಲದ ಶಾಸಕ ಸೊರೈಸಂ ಕೆಬಿ ಅವರ ನಿವಾಸದ ಗೇಟ್‌ ಬಳಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಇಂಫಾಲ: ಗುರುವಾರ ಇಲ್ಲಿನ ಶಾಸಕ ಸೊರೈಸಂ ಕೆಬಿ ಅವರ ನಿವಾಸದ ಗೇಟ್‌ ಬಳಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ನೆಲದಲ್ಲಿ ಕೆಲವು ರಂಧ್ರಗಳನ್ನು ಹೊರತುಪಡಿಸಿ, ಸ್ಫೋಟದಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಪೊಲೀಸರ ಪ್ರಕಾರ, ಇಬ್ಬರು ಬೈಕ್‌ ಸವಾರರು ನಿಂಗ್ಥೆಮ್ಚಾ ಕರೋಂಗ್‌ನ ಇಂಫಾಲ್ ವೆಸ್ಟ್ ಹ್ಯಾಮ್ಲೆಟ್‌ನಲ್ಲಿರುವ ನವೋರಿಯಾ ಪಖಾಂಗ್‌ಲಾಕ್‌ಪಾ ವಿಧಾನಸಭಾ ಕ್ಷೇತ್ರದ ಶಾಸಕ ಸೊರೈಸಂ ಕೆಬಿ ಅವರ ನಿವಾಸದ ಮೇಲೆ ಐಇಡಿ ಎಸೆದು ಸ್ಫೋಟಿಸಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ವರದಿಯಾಗದ ಕಾರಣ ಮಣಿಪುರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಮಣಿಪುರ ಸರ್ಕಾರದ ಸಲಹೆಗಾರ (ಭದ್ರತೆ) ಕುಲ್ದೀಪ್ ಸಿಂಗ್ ಗುರುವಾರ ಹೇಳಿದ್ದಾರೆ.

ಮಣಿಪುರದ ನಿರಾಶ್ರಿತ ಜನರಿಗೆ ಪರಿಹಾರ ಒದಗಿಸಲು, ಗೃಹ ವ್ಯವಹಾರಗಳ ಸಚಿವಾಲಯ 101.75 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದು ಸಿಂಗ್ ಹೇಳಿದರು.

ಇಲ್ಲಿಯವರೆಗೆ ಒಟ್ಟು 896 ಶಸ್ತ್ರಾಸ್ತ್ರಗಳು ಮತ್ತು 11,763 ಮದ್ದುಗುಂಡುಗಳು ಮತ್ತು ವಿವಿಧ ರೀತಿಯ 200 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರದ ಹಿಂಸಾಚಾರದ ಹಿನ್ನೆಲೆಯಲ್ಲಿ ಮೇ ತಿಂಗಳ ಆರಂಭದಲ್ಲಿ ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರಾಗಿ ನೇಮಕಗೊಂಡ ಸಿಂಗ್ ಹೇಳಿದರು.

ಜೂನ್ 1 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿಯ ಒಂದು ದಿನದ ನಂತರ, ಮಣಿಪುರದ ವಿವಿಧ ಸ್ಥಳಗಳಲ್ಲಿ ಒಟ್ಟು 140 ಶಸ್ತ್ರಾಸ್ತ್ರಗಳನ್ನು ಜನರು ಒಪ್ಪಿಸಿದ್ದಾರೆ. ಈ ಪೈಕಿ SLR 29, ಕಾರ್ಬೈನ್, AK, INSAS ರೈಫಲ್, INSAS LMG, 303 ರೈಫಲ್, 9 ಎಂಎಂ ಪಿಸ್ತೂಲ್, .32 ಪಿಸ್ತೂಲ್, ಎಂ16 ರೈಫಲ್, ಸ್ಮೋಕ್ ಗನ್ ಮತ್ತು ಟಿಯರ್ ಗ್ಯಾಸ್, ಸ್ಥಳೀಯವಾಗಿ ತಯಾರಿಸಿದ ಪಿಸ್ತೂಲ್, ಸ್ಟನ್ ಗನ್, ಮಾರ್ಪಡಿಸಿದ ರೈಫಲ್, ಜೆವಿಪಿ ಮತ್ತು ಗ್ರೆನೇಡ್ ಲಾಂಚರ್ ಸೇರಿವೆ.

ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಶಾಂತಿ ಕಾಪಾಡುವಂತೆ ಮಣಿಪುರದ ಜನತೆಗೆ ಶಾ ಮನವಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com