ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಆಂಬ್ಯುಲೆನ್ಸ್‌ಗೆ ಬೆಂಕಿ, 7 ವರ್ಷದ ಬಾಲಕ ಸೇರಿ ಮೂವರು ಸಜೀವ ದಹನ
ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಮತ್ತೊಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಲಮ್ಸಾಂಗ್ ಪಿಎಸ್ ವ್ಯಾಪ್ತಿಯ ಇರೊಸೆಂಬಾದಲ್ಲಿ ಗುಂಪು ದಾಳಿ ನಡೆದಿದ್ದು, ಇದರ ಪರಿಣಾಮವಾಗಿ 7 ವರ್ಷದ ಮಗು ಸೇರಿ ಮೂವರು ವ್ಯಕ್ತಿಗಳು ಸಜೀವ ದಹನವಾಗಿದ್ದಾರೆ.
Published: 07th June 2023 01:35 PM | Last Updated: 07th June 2023 01:35 PM | A+A A-

ಸಂಗ್ರಹ ಚಿತ್ರ
ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಮತ್ತೊಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಲಮ್ಸಾಂಗ್ ಪಿಎಸ್ ವ್ಯಾಪ್ತಿಯ ಇರೊಸೆಂಬಾದಲ್ಲಿ ಗುಂಪು ದಾಳಿ ನಡೆದಿದ್ದು, ಇದರ ಪರಿಣಾಮವಾಗಿ 7 ವರ್ಷದ ಮಗು ಸೇರಿ ಮೂವರು ವ್ಯಕ್ತಿಗಳು ಸಜೀವ ದಹನವಾಗಿದ್ದಾರೆ.
ಫಾಯೆಂಗ್‌ನಿಂದ ಇಂಫಾಲ್ ವೆಸ್ಟ್ ಕಡೆಗೆ ಪ್ರಯಾಣಿಸುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಾರುತಿ ಜಿಪ್ಸಿಯನ್ನು ಜನಸಮೂಹವೊಂದು ತಡೆದಿದೆ. ಈ ವೇಳೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಣಾಮ ಮೂವರು ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.
ಮೃತರನ್ನು ತೋನ್ಸಿಂಗ್ ಹ್ಯಾಂಗ್ಸಿಂಗ್ (7), ಮಗುವಿನ ತಾಯಿ 45 ವರ್ಷದ ಮೀನಾ ಹ್ಯಾಂಗ್ಸಿಂಗ್ ಮತ್ತು ಅವರ ನೆರೆಮನೆಯಾಕೆ ಲಿಡಿಯಾ ಲೌರೆಂಬಮ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ: ಅಮಿತ್ ಶಾ ನಿವಾಸದ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ
ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿ ಘಟನೆಯನ್ನು ದೃಢಪಡಿಸಿದ್ದಾರೆ. ಘಟನೆ ಬಳಿಕ ಶಿಬಿರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಮೃತಪಟ್ಟ ಬಾಲಕ ತೋನ್ಸಿಂಗ್' ಹಾಗೂ ಈತನ ತಾಯಿ ಕಾಂಗ್‌ಚುಪ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಉಳಿದುಕೊಂಡಿದ್ದರು. ಜೂನ್4 ರಂದು ಸಂಜೆ ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಶಿಬಿರದಲ್ಲಿದ್ದರೂ, ತೋನ್ಸಿಂಗ್'ಗೆ ಗುಂಡು ತಗುಲಿತ್ತು. ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು ಕೂಡಲೇ ಇಂಫಾಲ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು. ರಸ್ತೆಯ ಮೂಲಕ ಇಂಫಾಲ್‌ನಲ್ಲಿರುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮಗುವನ್ನು ಕರೆದೊಯ್ಯಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಆಂಬ್ಯುಲೆನ್ಸ್ ಕೆಲವು ಕಿಲೋಮೀಟರ್‌ಗಳವರೆಗೆ ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯಾಗಿ ಸಾಗಿತ್ತು, ಬಳಿಕ ಸ್ಥಳೀಯ ಪೊಲೀಸರು ಭದ್ರತೆ ನೀಡುವುದಾಗಿ ತಿಳಿಸಿದ್ದರು. ಸಂಜೆ 6.30ರ ಸುಮಾರಿಗೆ ಆ್ಯಂಬುಲೆನ್ಸ್ ನಲ್ಲಿ ಕುಕಿ ಸಮುದಾಯದವರನ್ನು ಸ್ಥಳಾಂತರಿಸಲಾಗುತತಿದೆ ಎಂಬ ವದಂತಿಗಳು ಹಬ್ಬಿದ್ದವು. ಇದನ್ನು ನಂಬಿದ ಗುಂಪೊಂದು ವಾಹನವನ್ನು ತಡೆದು, ಬೆಂಕಿ ಹಚ್ಚಿತು. ಪರಿಣಾಮ ಆ್ಯಂಬುಲೆನ್ಸ್ ನಲ್ಲಿದ್ದ ಮೂವರು ಸಜೀವ ದಹನವಾದರು.