ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

'21 ಉದ್ಯೋಗಗಳು, 225 ಹಗರಣಗಳು': ಮಧ್ಯ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಮಧ್ಯ ಪ್ರದೇಶದಲ್ಲಿ ವರ್ಷಾಂತ್ಯಕ್ಕೆ ನಡೆಯುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಜಬಲ್ಪುರದಲ್ಲಿ ಚಾಲನೆ ನೀಡಿದ್ದಾರೆ.
Published on

ಜಬಲ್ಪುರ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಮಧ್ಯ ಪ್ರದೇಶದಲ್ಲಿ ವರ್ಷಾಂತ್ಯಕ್ಕೆ ನಡೆಯುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಜಬಲ್ಪುರದಲ್ಲಿ ಚಾಲನೆ ನೀಡಿದ್ದು, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಜನತೆಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವ್ಯಾಪಂ ಮತ್ತು ಪಡಿತರ ವಿತರಣೆಯಲ್ಲಿನ ಭ್ರಷ್ಟಾಚಾರವನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ 220 ತಿಂಗಳ ಆಡಳಿತದಲ್ಲಿ 225 "ಹಗರಣಗಳು" ನಡೆದಿವೆ ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ  ಬಿಜೆಪಿ ಸರ್ಕಾರ ಕೇವಲ 21 ಜನರಿಗೆ ಮಾತ್ರ ಸರ್ಕಾರಿ ನೌಕರಿ ನೀಡಿದ್ದು, ಈ ಅಂಕಿ ಅಂಶ ನನ್ನ ಗಮನಕ್ಕೆ ತಂದಾಗ ಇದು ಸತ್ಯವಾ ಎಂದು ಅನುಮಾನಗೊಂಡು ನನ್ನ ಕಚೇರಿಯಿಂದ ಮೂರು ಬಾರಿ ಪರಿಶೀಲನೆ ನಡೆಸಿದ್ದೇನೆ ಎಂದರು.

ಮೇ 28 ರಂದು ಉಜ್ಜಯಿನಿಯ ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಆರು ವಿಗ್ರಹಗಳನ್ನು ಹಾನಿಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕಿ, ಚೌಹಾಣ್ ಸರ್ಕಾರ ದೇವರನ್ನೂ ಸಹ ಉಳಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದಲ್ಲಿ 900 ಮೀಟರ್ ಕಾರಿಡಾರ್ ಅನ್ನು 856 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು,  ಇದರ ಮೊದಲ ಹಂತವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

ಬಿಜೆಪಿಯ "ಡಬಲ್ ಇಂಜಿನ್ ಸರ್ಕಾರ"ದ ಸಮೀಕ್ಷೆಯನ್ನು ಲೇವಡಿ ಮಾಡಿದ ಪ್ರಿಯಾಂಕಾ ಗಾಂಧಿ, "ನಾವು ಸಾಕಷ್ಟು ಡಬಲ್ ಮತ್ತು ಟ್ರಿಪಲ್ ಎಂಜಿನ್ ಸರ್ಕಾರಗಳನ್ನು ನೋಡಿದ್ದೇವೆ. ಆದರೆ ಹಿಮಾಚಲ ಮತ್ತು ಕರ್ನಾಟಕದ ಜನರು ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com