ಕೋಲ್ಕತ್ತಾ: ಮಣಿಪುರ ಹಿಂಸಾಚಾರದ ಪರಿಸ್ಥಿತಿಯನ್ನು ಪರಿಶೀಲಿಸಲು ಸರ್ವಪಕ್ಷ ಸಭೆ ನಡೆಸಿದ್ದಕ್ಕಾಗಿ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಟಿಎಂಸಿ ಸಂಸದ ಸೌಗತ ರಾಯ್, ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಸಾಧ್ಯವಾಗದ ಅಮಿತ್ ಶಾ ಅವರ ಅಸಮರ್ಥತೆ ಬಗ್ಗೆ ಕಿಡಿಕಾರಿದ್ದಾರೆ ಮತ್ತು ಅಮಿತ್ ಶಾ ಅವರು ಮೂರು ದಿನಗಳ ಭೇಟಿಗಾಗಿ ಮಣಿಪುರಕ್ಕೆ ಹೋಗಿದ್ದರು. ಆದರೆ, ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಮಣಿಪುರದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಅಮಿತ್ ಶಾ ವಿಫಲರಾಗಿದ್ದಾರೆ. 3 ದಿನಗಳ ಭೇಟಿಗೆ ಅವರೇ ಅಲ್ಲಿಗೆ ಹೋದರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಮಣಿಪುರ ಸಿಎಂ ಪದಚ್ಯುತಿಗೆ ಒತ್ತಡ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಮಣಿಪುರ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈಗ ವಿದೇಶ ಪ್ರವಾಸಕ್ಕೆ ಹೋಗಬಾರದಿತ್ತು. ಆದರೆ, ಈಗ ಹೋಗಿದ್ದಾರೆ. ಸರಿ, ಯಾರೊಬ್ಬರೂ ಹೊರಗೆ ಹೋಗುವುದನ್ನು ನಾವು ಖಂಡಿಸುವುದಿಲ್ಲ ಎಂದು ಹೇಳಿದರು.
ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ (ಜೂನ್ 24) ದಂದು ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು.
ಹಿಂಸಾಚಾರ ಪೀಡಿತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಅಮಿತ್ ಶಾ ಅವರು ಸಭೆಯನ್ನು ಕರೆದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಮತ್ತು ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್ ಸೇರಿದಂತೆ ಇತರ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಮೇ 3 ರಂದು ಮಣಿಪುರದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್‌ಯು) ಮೇಟಿ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟಿಸಲು ಆಯೋಜಿಸಿದ್ದ ರ್ಯಾಲಿಯಲ್ಲಿ ಘರ್ಷಣೆ ಉಂಟಾದ ನಂತರ ರಾಜ್ಯದಲ್ಲಿ ಹಿಂಸಾಚಾರ ನಡೆಯಿತು.
ಮೇಟಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
Advertisement