ಡೆಹ್ರಾಡೂನ್: ಉತ್ತರಾಖಂಡದಲ್ಲಿ ಗುರುವಾರ ಭಾರೀ ಭೂಕುಸಿತ ಸಂಭವಿಸಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ 8,000 ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಚಿಂಕಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಸುಮಾರು 100 ಮೀಟರ್ ನಷ್ಟು ಹೆದ್ದಾರಿ ಸಂಪೂರ್ಣ ಕೊಚ್ಚಿ ಹೋಗಿದೆ. ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಮಾರು ಆರು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಸೇನಾ ಸಿಬ್ಬಂದಿ ಕೂಡ ಜಾಮ್‌ನಲ್ಲಿ ಸಿಲುಕಿಕೊಂಡಿದ್ದು, ತಡರಾತ್ರಿಯಾದರೂ ಹೆದ್ದಾರಿ ಸಂಚಾರ ಸರಿಪಡಿಸಲು ಸಾಧ್ಯವಾಗಿಲ್ಲ.
ಆಡಳಿತಾತ್ಮಕ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಂಜೆಯವರೆಗೂ ವಾಹನಗಳು, ಯಾತ್ರಾರ್ಥಿಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದರು.
ಸಂಜೆ 6 ಗಂಟೆಗೆ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್ ಜೋಶಿ ಅವರು ತಿಳಿಸಿದ್ದರು. ಆದರೆ ಕತ್ತಲೆಯಾದ ಕಾರಣ ಅವಶೇಷಗಳ ತೆರವು ಕಾರ್ಯಕ್ಕೆ ಅಡ್ಡಿಯಾಯಿತು. ಹೀಗಾಗಿ ಜಿಲ್ಲಾಡಳಿತ ಯಾತ್ರಾರ್ಥಿಗಳಿಗೆ ನೀರಿನ ಬಾಟಲಿ ಮತ್ತು ಬಿಸ್ಕತ್ತುಗಳನ್ನು ನೀಡಿದೆ.
Advertisement