
ಪಿಥೋರಗಢ: ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದ 10 ಮಂದಿಯಿದ್ದ ವಾಹನ ಮುನ್ಸಿಯಾರಿಯಲ್ಲಿ ಗುರುವಾರ 600 ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮ ಚಾಲಕ ಸೇರಿ ಕಾರಿನಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟ್ವೀಟ್‌ನಲ್ಲಿ, ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೊಲೆರೊದಲ್ಲಿ ಚಾಲಕ ಸೇರಿದಂತೆ 10 ಜನರಿದ್ದು, ಯಾರೊಬ್ಬರೂ ಬದುಕುಳಿದಿಲ್ಲ. ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪಿಥೋರಗಢ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಭೂಪೇಂದ್ರ ಸಿಂಗ್ ಮಹಾರ್ ತಿಳಿಸಿದ್ದಾರೆ.
ಸಂತ್ರಸ್ತರಲ್ಲಿ ನಿಶಾ ಸಿಂಗ್ (24) ಮತ್ತು ಉಮ್ಮದ್ ಸಿಂಗ್ (28) ಎಂಬ ದಂಪತಿಯಿದ್ದಾರೆ. ಇತರರನ್ನು ಕಿಶನ್ ಸಿಂಗ್ (65), ಧರ್ಮ ಸಿಂಗ್ (69), ಕುಂದನ್ ಸಿಂಗ್ (58), ಶಂಕರ್ ಸಿಂಗ್ (40), ಸುಂದರ್ ಸಿಂಗ್ (37), ಖುಶಾಲ್ ಸಿಂಗ್ (64), ಡಾನ್ ಸಿಂಗ್ ಮತ್ತು ವಾಹನ ಚಾಲಕ ಮಹೇಶ್ ಸಿಂಗ್ (40) ಎಂದು ಗುರುತಿಸಲಾಗಿದೆ.
ಸಂತ್ರಸ್ತರಲ್ಲಿ ಏಳು ಮಂದಿ ಸಾಮಾ ಗ್ರಾಮದವರು ಮತ್ತು ಮೂವರು ಬಾಗೇಶ್ವರ ಜಿಲ್ಲೆಯ ಕಾಪ್‌ಕೋಟ್ ಉಪ ವಿಭಾಗದ ಭನಾರ್ ಗ್ರಾಮದವರು ಎಂದು ಮಹಾರ್ ಹೇಳಿದರು.
ಯಾತ್ರಿಕರು ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಬೆಳಗ್ಗೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ದಿದಿಹತ್ ಎಸ್‌ಡಿಎಂ ಅನಿಲ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಕೆಲವು ಸ್ಥಳೀಯ ನಿವಾಸಿಗಳು ಕಾರು ಕಮರಿಗೆ ಬೀಳುವುದನ್ನು ನೋಡಿದ್ದಾರೆ ಮತ್ತು ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಇತರೆ ಅವಶೇಷಗಳು ರಸ್ತೆಗೆ ಬಿದ್ದಿದ್ದವು. ಇದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೊಕ್ರಾ ಗ್ರಾಮದ ನಿವಾಸಿ ಸುಂದರ್ ಸಿಂಗ್ ಹೇಳಿದರು.
Advertisement