ಅದಾನಿ-ಹಿಂಡೆನ್‌ಬರ್ಗ್ ವಿವಾದ: ತನಿಖೆಗಾಗಿ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ತನ್ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದ ಸಮಿತಿಯನ್ನು ರಚಿಸಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ತನ್ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದ ಸಮಿತಿಯನ್ನು ರಚಿಸಿದೆ. 

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ, ವಕೀಲರಾದ ವಿಶಾಲ್ ತಿವಾರಿ, ಎಂ.ಎಲ್ ಶರ್ಮಾ, ಕಾಂಗ್ರೆಸ್ ನಾಯಕಿ ಜಯ ಠಾಕೂರ್ ಮತ್ತು ಮತ್ತೋರ್ವ ಅನಾಮಿಕ ಜೈಸ್ವಾಲ್ ಸಲ್ಲಿಸಿದ್ದ ಅರ್ಜಿಗಳ ಮೇಲಿನ ವಿಚಾರಣೆ ಬಳಿಕ ಈ ಆದೇಶ ನೀಡಿದರು.

ಸಮಿತಿಯು ಒ.ಪಿ.ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್ (ನಿವೃತ್ತ), ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡಿರುತ್ತದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಅವರು ತಜ್ಞರ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಪೀಠ ಹೇಳಿದೆ.

ಸಮಿತಿಯು ಪರಿಸ್ಥಿತಿಯ ಒಟ್ಟಾರೆ ಮೌಲ್ಯಮಾಪನ ಮಾಡುತ್ತದೆ ಮತ್ತು ಮಾರುಕಟ್ಟೆಗಳಲ್ಲಿನ ಚಂಚಲತೆಗೆ ಕಾರಣವಾದ ಅಂಶಗಳನ್ನು ಒದಗಿಸುತ್ತದೆ. ಅಲ್ಲದೆ, ಸಮಿತಿಯು ಹೂಡಿಕೆದಾರರ ಜಾಗೃತಿಯನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುತ್ತದೆ ಮತ್ತು ಅದಾನಿ ಗ್ರೂಪ್ ಅಥವಾ ಇತರ ಕಂಪನಿಗಳಿಗೆ ಸಂಬಂಧಿಸಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಗಳಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಲ್ಲಿ ನಿಯಂತ್ರಕದ ವೈಫಲ್ಯವಿದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತದೆ ಎಂದು ಅದು ಹೇಳಿದೆ.

ಷೇರು ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ತಜ್ಞರ ಸಮಿತಿ ರಚಿಸುವ ಸಲಹೆಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಫೆಬ್ರುವರಿ 17 ರಂದು ನಿರಾಕರಿಸಿತ್ತು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆ ಮುಖ್ಯ. ಹೀಗಾಗಿ ಈ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆ ಅಗತ್ಯ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಹಾಲಿ ನ್ಯಾಯಮೂರ್ತಿಯೊಬ್ಬರಿಂದ ಉದ್ದೇಶಿತ ತಜ್ಞರ ಸಮಿತಿಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಿತು.

'ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ಆಗ, ನ್ಯಾಯಾಲಯದ ಬಗ್ಗೆ ಎಲ್ಲರಲ್ಲೂ ವಿಶ್ವಾಸ ಮೂಡುತ್ತದೆ. ಈ ವಿಷಯ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಡೆಸುವರು. ಆದರೆ, ಅವರು ಸಮಿತಿಯ ಭಾಗವಾಗಿರುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದರು.

'ಸಮಿತಿಯ ಮುಖ್ಯಸ್ಥರಾಗಿ ಮಾಜಿ ನ್ಯಾಯಾಧೀಶರು ಇರಬೇಕು ಎಂಬ ನಿಮ್ಮ ಪ್ರಭುತ್ವದ ಸಲಹೆ ಕುರಿತು ನಮಗೆ ಯಾವುದೇ ಅಭ್ಯಂತರವಿಲ್ಲ' ಎಂದು ಮೆಹ್ತಾ ಹೇಳಿದ್ದರು.

ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿಯುತ್ತಲೇ ಸಾಗಿದೆ. ಇದರಿಂದ ದೇಶದ ಹೂಡಿಕೆದಾರರಿಗೆ ನಷ್ಟವಾಗಿದೆ. ಇಂತಹ ನಷ್ಟವನ್ನು ತಪ್ಪಿಸಲು ಅಗತ್ಯ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ವಿಚಾರಣೆಗೆ ಎತ್ತಿಕೊಂಡಿತ್ತು.

ಆಗ, ‘ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಕಠಿಣವಾದ ನಿಯಂತ್ರಣ ವ್ಯವಸ್ಥೆ ಬೇಕು. ಈಗ ಇರುವ ನಿಯಂತ್ರಣ ವ್ಯವಸ್ಥೆಯ ಮೌಲ್ಯಮಾಪನವೂ ಆಗಬೇಕು. ಈಗಿನ ಸ್ಥಿತಿಯ ಪರಿಶೀಲನೆಗೆ ಸಮಿತಿ ರಚನೆಯಾಗಬೇಕು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿತ್ತು. ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com