ದೇಶದಲ್ಲಿ ಕೆಮ್ಮು, ಜ್ವರ ಹೆಚ್ಚಳಕ್ಕೆ H3N2 ಕಾರಣ; ಆ್ಯಂಟಿ ಬಯಾಟಿಕ್ ಗಳ ಅವೈಜ್ಞಾನಿಕ ಬಳಕೆ ಬೇಡ: ICMR

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಿರಂತರ ಕೆಮ್ಮು, ಕೆಲವೊಮ್ಮೆ ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಜ್ಞರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಿರಂತರ ಕೆಮ್ಮು, ಕೆಲವೊಮ್ಮೆ ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಜ್ಞರು ಹೇಳಿದ್ದಾರೆ.

ಕಳೆದ ಎರಡು-ಮೂರು ತಿಂಗಳುಗಳಿಂದ ಭಾರತದಲ್ಲಿ ಕೆಮ್ಮು, ತೀವ್ರ ಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣ. ಕಳೆದ ಎರಡು-ಮೂರು ತಿಂಗಳುಗಳಿಂದ ವ್ಯಾಪಕವಾಗಿ ಚಲಾವಣೆಯಲ್ಲಿರುವ H3N2, ಇತರ ಉಪವಿಭಾಗಗಳ ಸೋಂಕಿನ ಕಾರಣದಿಂದಾಗಿ ಹೆಚ್ಚು ಮಂದಿ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ. 

ಸಂಶೋಧನೆಯ ಮೂಲಕ ಉಸಿರಾಟದ ವೈರಸ್‌ಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ನಿಕಟ ನಿಗಾ ಇಡಲಾಗುತ್ತಿದೆ. ರೋಗನಿರ್ಣಯ ಪ್ರಯೋಗಾಲಯಗಳ ಜಾಲ ವಿಸ್ತರಿಸಲಾಗುತ್ತಿದೆ ಎಂದು ಐಸಿಎಂಆರ್ ಹೇಳಿದೆ. ಅಂತೆಯೇ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಹ ಐಸಿಎಂಆರ್ ಬಿಡುಗಡೆ ಮಾಡಿದೆ.

ಮತ್ತೊಂದೆಡೆ, ದೇಶಾದ್ಯಂತ ಹೆಚ್ಚುತ್ತಿರುವ ಕೆಮ್ಮು, ಶೀತ ಮತ್ತು ವಾಕರಿಕೆ ಪ್ರಕರಣಗಳ ಮಧ್ಯೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಆಂಟಿಬಯೋಟಿಕ್‌ಗಳ ವಿವೇಚನೆಯಿಲ್ಲದ ಬಳಕೆಯ ವಿರುದ್ಧ ಸಲಹೆ ನೀಡಿದ್ದು, ಆ್ಯಂಟಿ ಬಯಾಟಿಕ್ ಗಳ ಅವೈಜ್ಞಾನಿಕ ಬಳಕೆ ಬೇಡ ಎಂದು ಎಚ್ಚರಿಸಿದೆ. ಅಲ್ಲದೆ ಋತುಮಾನದ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳ ಕೊನೆಯಲ್ಲಿ ಹೋಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ಈ ಬಗ್ಗೆ ಆತಂಕ ಬೇಡ ಎಂದು IMA ಯ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿ ಸಮಿತಿ ಹೇಳಿದೆ.

ವಾಯುಮಾಲಿನ್ಯದಿಂದಾಗಿ ವೈರಲ್ ಪ್ರಕರಣಗಳು ಹೆಚ್ಚಿವೆ, ಇದು ಹೆಚ್ಚಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ ಮತ್ತು ಜ್ವರದ ಜೊತೆಗೆ ಮೇಲ್ಭಾಗದ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ ಎಂದು ಅದು ಹೇಳಿದೆ.

ಅಸೋಸಿಯೇಷನ್ ವೈದ್ಯರಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ಸೂಚಿಸುವಂತೆ ಕೇಳಿದ್ದು, ಪ್ರತಿಜೀವಕಗಳನ್ನು (ಆ್ಯಂಟಿ ಬಯಾಟಿಕ್) ಶಿಫಾರಸ್ಸು ಮಾಡದಂತೆ ಸೂಚಿಸಿದೆ. ಈ ಪ್ರತಿಜೀವಕಗಳು ಅಥವಾ ಆ್ಯಂಟಿ ಬಯಾಟಿಕ್ ಗಳು ರೋಗಿಯ ರೋಗನಿರೋಧಕತೆಯನ್ನು ಕುಂದಿಸುವ ಅಪಾಯವನ್ನು ಐಸಿಎಂಆರ್ ಒತ್ತಿ ಹೇಳಿದೆ.  ಜನರು ಅಜಿಥ್ರೊಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮುಂತಾದ ಪ್ರತಿಜೀವಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಆದರೆ ಕೊಂಚ ರಿಲೀಫ್ ದೊರೆತ ತಕ್ಷಣ ಅವುಗಳ ಬಳಕೆಯನ್ನು ನಿಲ್ಲಿಸಿ ಬಿಡುತ್ತಾರೆ. ಇದರಿಂದ ಉಪಯೋಗಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು.. ಇಂತಹ ಸಂದರ್ಭದಲ್ಲಿ ಅವುಗಳು ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ ಎಂದು ಐಸಿಎಂಆರ್ ಆತಂಕ ವ್ಯಕ್ತಪಡಿಸಿದೆ. 

ಅಮೋಕ್ಸಿಸಿಲಿನ್, ನಾರ್ಫ್ಲೋಕ್ಸಾಸಿನ್, ಓಪ್ರೊಫ್ಲೋಕ್ಸಾಸಿನ್, ಆಫ್ಲೋಕ್ಸಾಸಿನ್ ಮತ್ತು ಲೆವೊಫ್ಲೋಕ್ಸಾಸಿನ್ ಹೆಚ್ಚು ದುರ್ಬಳಕೆಯ ಪ್ರತಿಜೀವಕಗಳಾಗಿವೆ. ಅತಿಸಾರ ಮತ್ತು ಯುಟಿಐ ಚಿಕಿತ್ಸೆಗಾಗಿ ಇವುಗಳನ್ನು ಬಳಸಲಾಗುತ್ತಿದೆ. ನಾವು ಈಗಾಗಲೇ ಕೋವಿಡ್ ಸಮಯದಲ್ಲಿ ಅಜಿಥ್ರೊಮೈಸಿನ್ ಮತ್ತು ಐವರ್ಮೆಕ್ಟಿನ್ ಅನ್ನು ವ್ಯಾಪಕವಾಗಿ ಬಳಸುವುದನ್ನು ನೋಡಿದ್ದೇವೆ ಮತ್ತು ಇದು ಪ್ರತಿರೋಧಕ್ಕೆ ಕಾರಣವಾಗಿದೆ. ಪ್ರತಿಜೀವಕಗಳನ್ನು ಶಿಫಾರಸು ಮಾಡುವ ಮೊದಲು ಸೋಂಕು ಬ್ಯಾಕ್ಟೀರಿಯಾ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಅವಶ್ಯಕ" ಎಂದು ಅದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com