
ದೆಹಲಿ ಸಿಎಂ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಬೆಳಗ್ಗೆ 10 ಗಂಟೆಯಿಂದ ಏಳು ಗಂಟೆಗಳ ಕಾಲ ಧ್ಯಾನ ಮಾಡಲು ಆರಂಭಿಸಿದ್ದಾರೆ.
ಟ್ವಿಟರ್‌ನಲ್ಲಿ ಎಎಪಿ ಕೇಜ್ರಿವಾಲ್ ಧ್ಯಾನ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, "ಇಂದು ಕೇಜ್ರಿವಾಲ್ ಅವರು ದೇಶಕ್ಕಾಗಿ ಪ್ರಾರ್ಥಿಸುತ್ತಾರೆ" ಎಂದು ಹೇಳಿದೆ.
ಧ್ಯಾನ ಆರಂಭಿಸುವ ಮುನ್ನ ಕೇಜ್ರಿವಾಲ್ ಅವರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಒಳ್ಳೆಯ ಕೆಲಸ ಮಾಡುತ್ತಿರುವವರನ್ನು ಬಂಧಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಇಂದು ಕೇಜ್ರಿವಾಲ್ ಅವರು ಭಾರತದ ಅತ್ಯಂತ ಹಳೆಯ ಧ್ಯಾನ ಅಭ್ಯಾಸಗಳಲ್ಲಿ ಒಂದಾದ ವಿಪಾಸನ ಮಾಡುತ್ತಿದ್ದಾರೆ.
ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಬಂಧನದ ಹಿನ್ನೆಲೆಯಲ್ಲಿ ಇಂದು ಧ್ಯಾನ ಮಾಡುವುದಾಗಿ ಮತ್ತು ಹೋಳಿ ಆಚರಿಸುವುದಿಲ್ಲ ಎಂದು ದೆಹಲಿ ಸಿಎಂ ಘೋಷಿಸಿದ್ದಾರೆ.
ಇದನ್ನು ಓದಿ: ಜೈಲಿನಲ್ಲಿ ಕೊಲೆಗಾರರ ಜತೆ ಸಿಸೋಡಿಯಾ ಇರಿಸಿದ್ದು ಏಕೆ?: 'ರಾಜಕೀಯ ಕೊಲೆ'ಗೆ ಸಂಚು ಎಂದ ಆಪ್
ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗಾಗಿ, ಭಾರತದ ಉಳಿವಿಗಾಗಿ ಪ್ರಾರ್ಥಿಸುವುದಾಗಿ ದೆಹಲಿ ಮುಖ್ಯಮಂತ್ರಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಸಿಸೋಡಿಯಾ ಮತ್ತು ಜೈನ್ ಅವರನ್ನು ಬಂಧಿಸಲಾಗಿದೆ. ಆದರೆ ಅದಾನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ಪ್ರಧಾನಿ ಮೋದಿ, ಜನರಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯ ನೀಡುವವರನ್ನು ಜೈಲಿಗೆ ತಳ್ಳಿ, ದೇಶ ದರೋಡೆ ಮಾಡುವವರನ್ನು ಬೆಂಬಲಿಸುತ್ತಿರುವುದು ಆತಂಕಕಾರಿ. ನಾನು ದೇಶಕ್ಕಾಗಿ ಧ್ಯಾನ ಮಾಡುತ್ತೇನೆ, ಪ್ರಾರ್ಥಿಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.