2019ರಲ್ಲಿ ಕಳೆದುಕೊಂಡ 160 ಲೋಕಸಭಾ ಕ್ಷೇತ್ರಗಳ ಮೇಲೆ ಬಿಜೆಪಿ ಗಮನ: ಪ್ರಧಾನಿ ಮೋದಿ ರ್ಯಾಲಿ ನಡೆಸಲು ಯೋಜನೆ

ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ. ಮುಂದಿನ ವರ್ಷ 2024ರ ಏಪ್ರಿಲ್-ಮೇ ಹೊತ್ತಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ. ಮುಂದಿನ ವರ್ಷ 2024ರ ಏಪ್ರಿಲ್-ಮೇ ಹೊತ್ತಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅದರ ಪೂರ್ವಭಾವಿಯಾಗಿ, ಕಳೆದ ಚುನಾವಣೆಯಲ್ಲಿ ಪಕ್ಷವು ಅಲ್ಪ ಅಂತರದಲ್ಲಿ ಸೋತಿರುವ 160 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಆ ಕ್ಷೇತ್ರಗಳನ್ನು ಮತ್ತೆ ಪಡೆಯುವ ಯೋಜನೆ ಕೇಸರಿ ಪಡೆಯದ್ದು. 

2019 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿ ಸೋತಿರುವ ದೇಶಾದ್ಯಂತ 160 ಲೋಕಸಭಾ ಸ್ಥಾನಗಳನ್ನು ಪಕ್ಷ ಗುರುತಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು, ಗುರುತಿಸಲಾದ ದುರ್ಬಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿಯವರ ಸಾರ್ವಜನಿಕ ರ್ಯಾಲಿಗಳನ್ನು ನಡೆಸಲು ಬಿಜೆಪಿ ಪ್ರಯತ್ನಿಸುವುದಲ್ಲದೆ, ಪ್ರಧಾನಿಯವರು ಅಲ್ಲಿ ಸಂಚಾರ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಲು ವಿಶೇಷ ಪ್ರಚಾರಗಳನ್ನು ಸಹ ನಡೆಸುತ್ತದೆ. 

ಮುಂದಿನ ಲೋಕಸಭೆ ಚುನಾವಣೆಯಲ್ಲಿ 400 ಸೀಟು ಗೆಲ್ಲುವ ಗುರಿ ಹೊಂದಲಾಗಿದ್ದು, ಬಿಜೆಪಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಪ್ರಧಾನಿ ರ್ಯಾಲಿಯನ್ನು ನಡೆಸಲಿದೆ. ವಿವಿಧ ಸ್ಥಳಗಳಲ್ಲಿ ದೊಡ್ಡ ಪರದೆಗಳಲ್ಲಿ ರ್ಯಾಲಿಯನ್ನು ಪ್ರಸಾರ ಮಾಡಲು ಹೈಟೆಕ್ ವ್ಯವಸ್ಥೆ ಇರುತ್ತದೆ. 160 ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸಗಳ ಮೇಲ್ವಿಚಾರಣೆಗಾಗಿ ಪಕ್ಷವು ಹಿರಿಯ ನಾಯಕರಾದ ಸುನಿಲ್ ಬನ್ಸಾಲ್, ತರುಣ್ ಚುಗ್ ಮತ್ತು ವಿನೋದ್ ತಾವಡೆ ಅವರ ಮೂರು ಸದಸ್ಯರ ತಂಡವನ್ನು ರಚಿಸಿದೆ.

ಒಂದು ಕ್ಲಸ್ಟರ್‌ನಲ್ಲಿ ನಾಲ್ಕು ಕ್ಷೇತ್ರಗಳು ಸೇರಿದಂತೆ 160 ದುರ್ಬಲ ಸ್ಥಾನಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಬಿಜೆಪಿ ಚಿಂತಕರ ಚಾವಡಿಯಿಂದ ತಿಳಿದುಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಮುಖ ತಂತ್ರಜ್ಞ ಅಮಿತ್ ಶಾ ಸೇರಿದಂತೆ ಇತರ ಹಿರಿಯ ನಾಯಕರು ಉದ್ದೇಶಿತ ಪಿಎಂ ರ್ಯಾಲಿಗಳ ಜೊತೆಗೆ ಕ್ಷೇತ್ರಗಳಲ್ಲಿ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಒಟ್ಟು 160 ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳು ಕೇರಳ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ಬಂದಿದ್ದು, ಅಲ್ಲಿ ಪಕ್ಷವು ಮಿಷನ್ ಸೌತ್‌ನ ಭಾಗವಾಗಿ ಪ್ರಚಾರವನ್ನು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿವೆ.

2024 ರಲ್ಲಿ ಗುರುತಿಸಲಾದ 160 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 90-110 ಸ್ಥಾನಗಳನ್ನು ಗೆಲ್ಲುವ ಕಾರ್ಯತಂತ್ರದ ಭಾಗವಾಗಿ, ಬಿಜೆಪಿಯು ಹಿರಿಯ ಕೇಂದ್ರ ಸಚಿವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸಚಿವರು ಈ ಕ್ಷೇತ್ರಗಳಿಗೆ ಭೇಟಿ ನೀಡಿ ರ್ಯಾಲಿ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com