
ಕೇಂದ್ರ ಸಚಿವ ಗಡ್ಕರಿ- ಸಿಎಂ ಯೋಗಿ ಆದಿತ್ಯನಾಥ್
ಲಖನೌ: ಕೇಂದ್ರ ಸಚಿವ ನಿತಿನ್ ಗಡ್ಕರಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು, ದುಷ್ಟರನ್ನು ನಿಗ್ರಹಿಸಿದ ಭಗವಾನ್ ಕೃಷ್ಣನಿಗೆ ಹೋಲಿಕೆ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿಯಂತ್ರಿಸುತ್ತಿರುವುದಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ನಿತಿನ್ ಗಡ್ಕರಿ ಹೊಗಳಿದ್ದಾರೆ.
ಉತ್ತರ ಪ್ರದೇಶದಲ್ಲಿನ ರಸ್ತೆಗಳನ್ನು ಅಮೇರಿಕಾದ ರಸ್ತೆಗಳ ಸಮನಾಗಿ ಅಭಿವೃದ್ಧಿಪಡಿಸುವುದಕ್ಕೆ ಶ್ರಮಿಸಲಾಗುತ್ತಿದೆ.
"ಸಿಎಂ ಯೋಗಿ ಆದಿತ್ಯನಾಥ್ ಜನರನ್ನು ದುಷ್ಟರಿಂದ ರಕ್ಷಿಸುವುದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಗಡ್ಕರಿ 10,000 ಕೋಟಿ ರೂಪಾಯಿ ಮೌಲ್ಯದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಹೇಳಿದ್ದಾರೆ.
ಇದನ್ನೂ ಓದಿ: 'ಇಂದು ವಿದೇಶದಲ್ಲಿ ಭಾರತವನ್ನು ಟೀಕಿಸುವವರು...': ರಾಹುಲ್ ವಿರುದ್ಧ ಯುಪಿ ಸಿಎಂ ಯೋಗಿ ವಾಗ್ದಾಳಿ
"ನಾನು ಇತ್ತೀಚೆಗೆ ನನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ಆಗ ಅವರು ಉತ್ತರ ಪ್ರದೇಶದಲ್ಲೇನಾಗುತ್ತಿದೆ? ಎಂದು ಪ್ರಶ್ನಿಸಿದ್ದರು. ಸರ್ಕಾರ 6 ವರ್ಷಗಳಿಂದ ಅಪರಾಧಗಳ ತಡೆಗೆ ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ಹೇಳಿದಾಗ ಆಕೆ ಅಧರ್ಮ ಹೆಚ್ಚಾದಾಗಲೆಲ್ಲಾ ಅವತರಿಸಿ ಬರುವೆ ಎಂದು ಭಗವಂತ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿದರು" ಎಂದು ಗಡ್ಕರಿ ಹೇಳಿದ್ದಾರೆ.
ಭಗವಾನ್ ಕೃಷ್ಣ ಮಾಡಿದ ಕೆಲಸಗಳ ಮಾದರಿಯಲ್ಲೇ ಯೋಗಿ ಆದಿತ್ಯನಾಥ್ ಸಹ ಕೆಲಸ ಮಾಡುತ್ತಿದ್ದಾರೆ. ಅವರು ಸಜ್ಜನರನ್ನು ರಕ್ಷಿಸುತ್ತಿದ್ದಾರೆ. ಸಮಾಜಕ್ಕೆ ಕಂಟಕರಾಗಿರುವವರ ವಿರುದ್ಧ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಿಎಂ ಸಮ್ಮುಖದಲ್ಲಿ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.