ಪ್ರಜಾಪ್ರಭುತ್ವ 'ನಾಶ' ಮಾಡುತ್ತಿರುವವರ ಬಾಯಲ್ಲಿ ರಕ್ಷಣೆಯ ಮಾತು: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಲಂಡನ್ ನಲ್ಲಿ ರಾಹುಲ್ ಗಾಂಧಿಯವರು ನೀಡಿರುವ ಹೇಳಿಕೆ ಸಂಬಂಧ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ್ದಾರೆ.
Published: 13th March 2023 02:03 PM | Last Updated: 04th April 2023 11:10 AM | A+A A-

ನವದೆಹಲಿಯಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇತರ ವಿರೋಧ ಪಕ್ಷಗಳ ನಾಯಕರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು.
ನವದೆಹಲಿ: ಲಂಡನ್ ನಲ್ಲಿ ರಾಹುಲ್ ಗಾಂಧಿಯವರು ನೀಡಿರುವ ಹೇಳಿಕೆ ಸಂಬಂಧ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ್ದಾರೆ.
ಬಿಆರ್‌ಎಸ್, ಎಡ ಪಕ್ಷಗಳು ಮತ್ತು ಎಎಪಿ ಸೇರಿದಂತೆ ಇತರ ವಿರೋಧ ಪಕ್ಷಗಳ ಸಂಸದರೊಂದಿಗೆ ಸಂಸತ್ ಭವನದ ಸಂಕೀರ್ಣದಿಂದ ವಿಜಯ್ ಚೌಕ್‌ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆಯವರು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿಜಯ್ ಚೌಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ಬಿಜೆಪಿ ಪ್ರಜಾಪ್ರಭುತ್ವವನ್ನು ತುಳಿದು ನಾಶಪಡಿಸುತ್ತಿದೆ. ಒಂದು ಕಡೆ ಪ್ರಜಾಪ್ರಭುತ್ವನ್ನು ನಾಶಪಡಿಸಿ, ಮತ್ತೊಂದೆಡ ಅದನ್ನು ರಕ್ಷಣೆ ಮಾಡುವ ಮಾತನ್ನಾಡುತ್ತಿದ್ದಾರೆಂದು ಕಿಡಿಕಿದ್ದಾರೆ.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ದೇಶವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಲಂಡನ್‌ನಲ್ಲಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ಕೈಗೊಳ್ಳಬೇಕು: ಗಿರಿರಾಜ್ ಸಿಂಗ್
ಕೇಂದ್ರ ಸಂಸ್ಥೆಗಳ 'ದುರುಪಯೋಗ'ದ ಮೂಲಕ ವಿರೋಧ ಪಕ್ಷಗಳನ್ನು 'ನಿಗ್ರಹಿಸುತ್ತಿದ್ದಾರೆ'. ಇದು ''ಉಲ್ಟಾ ಚೋರ್, ಕೊತ್ವಾಲ್ ಕೋ ಡಾಂಟೆ' ಗಾದೆಯಂತಿದೆ. ಪ್ರಧಾನಿ ಮೋದಿ ಅವರು ವಿದೇಶದಲ್ಲಿ ಭಾರತವನ್ನು ಹಲವಾರು ಬಾರಿ "ಅಪಹಾಸ್ಯ" ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಚೀನಾ, ದಕ್ಷಿಣ ಕೊರಿಯಾ, ಕೆನಡಾ ಮತ್ತು ಯುಎಇಯಲ್ಲಿ ಅವರು ಮಾಡಿದ ಭಾಷಣಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.
ಪ್ರಧಾನಿ ಮೋದಿಯವರು ಭಾರತದ ವಿರುದ್ಧ ಎಲ್ಲಾ ರೀತಿಯ ಮಾತುಗಳನ್ನು ಹೇಳಬಹುದಾದರೆ, ರಾಹುಲ್ ಗಾಂಧಿ ಹಾಗೆ ಮಾಡಿದರೆ ಅದು ಅಪರಾಧ ಏಕೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅದಾನಿ-ಹಿಂಡೆನ್‌ಬರ್ಗ್ ವಿಚಾರದಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಅದಾನಿ ವಿಷಯದ ಬಗ್ಗೆ ಜೆಪಿಸಿ (ಜಂಟಿ ಸಂಸದೀಯ ಸಮತಿ)ಗೆ ಒತ್ತಾಯಿಸುತ್ತಿದ್ದೇವೆ. ಸರ್ಕಾರವು ಇದರಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ನಾವು ಒಟ್ಟಾಗಿರುತ್ತೇವೆಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ, ರಾಜಕೀಯ, ಸಂಸದೀಯ ವ್ಯವಸ್ಥೆಯನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ: ಬಿಜೆಪಿ
ರಾಜ್ಯಸಭೆಯಲ್ಲಿ ತಾರತಮ್ಯಗಳು ನಡೆಯುತ್ತಿವೆ. ಸದನದ (ರಾಜ್ಯಸಭೆ) ಭಾಗವೇ ಇಲ್ಲದವರ ಬಗ್ಗೆ ಹೇಗೆ ಪ್ರಶ್ನೆಗಳನ್ನು ಎತ್ತುತ್ತಾರೆ? ಸಭಾನಾಯಕರು 10 ನಿಮಿಷಗಳ ಕಾಲ ಮಾತನಾಡಿದರು ಮತ್ತು ವಿಪಕ್ಷಗಳ ನಾಯಕರಿಗೆ ಕೇವಲ ಎರಡು ನಿಮಿಷ ನೀಡಲಾಯಿತು. ಇದನ್ನು ಪ್ರಶ್ನಿಸಿದರೆ ಕಲಾಪವನ್ನೇ ಮುಂದೂಡಲಾಯಿತು. ಇದು ಯಾವ ನಿಯಮ?... ಅದಾನಿ ವಿಚಾರ ಕುರಿತು ಧ್ವನಿ ಎತ್ತಿದಾಗಲೆಲ್ಲಾ ಮೈಕ್ ಗಳನ್ನು ಆಫ್ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಅಂತ್ಯವಾಗಿದೆ ಎಂದು ಕಿಡಿಕಾರಿದರು.
ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಭಾರತದ ಪ್ರಜಾಪ್ರಭುತ್ವ"ಕ್ರೂರ ದಾಳಿ"ಗೆ ಒಳಗಾಗಿದೆ. ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಯುತ್ತಿದೆ. ಪ್ರಜಾಪ್ರಭುತ್ವಗಳ ರಕ್ಷಕರಾದ ಯುರೋಪ್ ಮತ್ತು ಅಮೇರಿಕಾ ಭಾರತದಲ್ಲಿ ಪ್ರಜಾಪ್ರಭುತ್ವದ ದೊಡ್ಡ ಅಪಾಯದಲ್ಲಿ ಇದೆ ಎಂಬುದರ ಬಗ್ಗೆ ಏಕೆ ಮರೆತಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.