ಮಾಡಾಳ್ ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ವಿರುದ್ಧ ಕರ್ನಾಟಕ ಲೋಕಾಯುಕ್ತ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ (KSDL) ಗುತ್ತಿಗೆ ಹಗರಣದಲ್ಲಿ ಪುತ್ರ ಸರ್ಕಾರಿ ಅಧಿಕಾರಿ ಮಾಡಾಳ್ ಪ್ರಶಾಂತ್ ಮೂಲಕ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.

ಅರ್ಜಿಯನ್ನು ಆರಂಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ತುರ್ತು ಪಟ್ಟಿಗೆ ಉಲ್ಲೇಖಿಸಲಾಗಿತ್ತು, ಅವರು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲು ಲೋಕಾಯುಕ್ತ ವಕೀಲರಿಗೆ ಸೂಚಿಸಿದರು. 

ಈ ವಿಷಯವನ್ನು ಆದಷ್ಟು ಮುಂಚಿತವಾಗಿ ಪಟ್ಟಿ ಮಾಡುವಂತೆ ವಕೀಲರು ಕೋರಿದಾಗ, ಮುಖ್ಯ ನ್ಯಾಯಮೂರ್ತಿಗಳು ಸಾಂವಿಧಾನಿಕ ಪೀಠದ ವಿಷಯದ ವಿಚಾರಣೆ ನಡೆಸುತ್ತಿರುವುದರಿಂದ ಪೀಠವು ಅದನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದು ಸಿಜೆಐ ಹೇಳಿದರು.

ಮುಖ್ಯ ನ್ಯಾಯಮೂರ್ತಿಗಳಾದ ಚಂದ್ರಚೂಡ್, "ನೀವು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಬಹುದು. ನಾವು ಈಗ ಸಾಂವಿಧಾನಿಕ ಪೀಠದ ವಿಷಯವನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.

ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದು ವಕೀಲರು ತಿಳಿಸಿದರು. ಅದಕ್ಕೆ ಸಿಜೆಐ ಚಂದ್ರಚೂಡ್, "ಸರಿ. ಹಾಗಾದರೆ ನೀವು ನ್ಯಾಯಮೂರ್ತಿ ಕೌಲ್ ಅವರ ಮುಂದೆ ಪ್ರಸ್ತಾಪಿಸಿ" ಎಂದು ಹೇಳಿದರು.

ವಕೀಲರು ತಕ್ಷಣ ನ್ಯಾಯಮೂರ್ತಿ ಕೌಲ್ ನೇತೃತ್ವದ ನ್ಯಾಯಾಲಯಕ್ಕೆ ಧಾವಿಸಿ ಅರ್ಜಿಯ ತುರ್ತು ಪಟ್ಟಿಯನ್ನು ಕೋರಿದರು. ಆದಾಗ್ಯೂ, ಅರ್ಜಿಯ ತುರ್ತು ವಿಚಾರಣೆ ಏಕೆ ನಡೆಸಬೇಕು ಎಂದು ನ್ಯಾಯಮೂರ್ತಿ ಕೌಲ್ ವಕೀಲರನ್ನು ಕೇಳಿದರು.

ಆರೋಪಿ ಹಾಲಿ ಶಾಸಕರಾಗಿದ್ದು, ಅವರ ಬಳಿಯಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕೀಲರು ಹೇಳಿದರು. ಇದು ಜಾಮೀನು ರದ್ದತಿ ವಿಷಯವಾಗಿದ್ದು, ಸೂಕ್ತ ಸಮಯದಲ್ಲಿ ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಬಿಜೆಪಿ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಕೆಎಸ್‌ಡಿಎಲ್ ಕಚೇರಿಯಲ್ಲಿ ತಂದೆಯ ಪರವಾಗಿ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಾರ್ಚ್ 2 ರಂದು ಬಂಧಿಸಿದ್ದರು.

ಶಾಸಕರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಗನ ಬಂಧನದ ಹಿನ್ನೆಲೆಯಲ್ಲಿ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕಾಶಪ್ಪ ರಾಜೀನಾಮೆ ನೀಡಿದ್ದರು.

ಷರತ್ತುಬದ್ಧ ಜಾಮೀನು ನೀಡುವಾಗ, ಆದೇಶ ಪ್ರತಿಯನ್ನು ಸ್ವೀಕರಿಸಿದ 48 ಗಂಟೆಗಳ ಒಳಗೆ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಹೈಕೋರ್ಟ್ ಶಾಸಕರಿಗೆ ಸೂಚಿಸಿದೆ. 5 ಲಕ್ಷ ಬಾಂಡ್‌ಗೆ ಒಳಪಟ್ಟು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ವಿರೂಪಾಕ್ಷಪ್ಪ ಅವರು ಜಾಮೀನಿನಲ್ಲಿರುವಾಗ ಸಾಕ್ಷಿಯನ್ನು ಹಾಳು ಮಾಡದಂತೆಯೂ ಸೂಚಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಲಾಗಿದೆ.

ಆಪಾದಿತ ಲಂಚ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಮತ್ತು ಅದರಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಶಾಸಕರರ ಅರ್ಜಿಯಲ್ಲಿ ಹೇಳಿದ್ದಾರೆ. 

ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆಗೆ ಸಂಬಂಧಿಸಿದ ಹಗರಣದಲ್ಲಿ 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಪರವಾಗಿ ಈ ಲಂಚದ 40 ಲಕ್ಷ ರೂ.ಗಳನ್ನು ಪಡೆಯುತ್ತಿದ್ದಾಗ ಅವರ ಪುತ್ರ ಸಿಕ್ಕಿಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com