ಸುಳ್ಳು ಆಧಾರಿತ, ಸಂಘಟಿತ ವೈಯಕ್ತಿಕ ದಾಳಿ; ಬ್ರಿಟನ್ ನಲ್ಲಿ ರಾಹುಲ್ ಭಾಷಣದ ಟೀಕೆಗಳಿಗೆ ಸ್ಯಾಮ್ ಪಿತ್ರೋಡಾ ಪ್ರತಿಕ್ರಿಯೆ
ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಬ್ರಿಟನ್ ಭಾಷಣದಲ್ಲಿನ ರಾಹುಲ್ ಗಾಂಧಿ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಾಂಗ್ರೆಸ್ ನ ವಿದೇಶ ಸಂಪರ್ಕ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿ ಸಮರ್ಥನೆಗೆ ಮುಂದಾಗಿದ್ದಾರೆ.
Published: 14th March 2023 04:46 PM | Last Updated: 14th March 2023 07:00 PM | A+A A-

ಸ್ಯಾಮ್ ಪಿತ್ರೋಡಾ - ರಾಹುಲ್ ಗಾಂಧಿ
ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಬ್ರಿಟನ್ ಭಾಷಣದಲ್ಲಿನ ರಾಹುಲ್ ಗಾಂಧಿ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಾಂಗ್ರೆಸ್ ನ ವಿದೇಶ ಸಂಪರ್ಕ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿ ಸಮರ್ಥನೆಗೆ ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಅವರು ನೆರವಿವಾಗಿ ಎಂದಿಗೂ ವಿದೇಶಗಳನ್ನು ಆಹ್ವಾನಿಸಿಲ್ಲ. ಅವರು ಸುಳ್ಳು ಆಧಾರಿತ, ತಪ್ಪು ಮಾಹಿತಿಯನ್ನೊಳಗೊಂಡ ಸಂಘಟಿತ ವೈಯಕ್ತಿಕ ದಾಳಿಗಳಿಗೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿ ನೀಡಿದ್ದ ಹೇಳಿಕೆ ಸಂಸತ್ ನಲ್ಲೂ ಗದ್ದಲ ಉಂಟುಮಾಡಿತ್ತು. ಪರಿಣಾಮ ಬಜೆಟ್ ಅಧಿವೇಶದ ಉತ್ತರಾರ್ಧ ಕಲಾಪದ ಮೊದಲ ಎರಡು ದಿನಗಳು ವ್ಯರ್ಥವಾಗಿತ್ತು.
ಕೇಂದ್ರ ಸಚಿವರ ಗುಂಪು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದರೆ, ಇದನ್ನು ಎದುರಿಸಲು ಕಾಂಗ್ರೆಸ್ ಅದಾನಿ ವಿಷಯವಾಗಿ ಜಂಟಿ ಸದನ ಸಮಿತಿ ತನಿಖೆಯ ಅಸ್ತ್ರವನ್ನು ಪ್ರಯೋಗಿಸಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಜವಾಬ್ದಾರಿಯಿಂದ ಮಾತನಾಡಬೇಕು: ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ
ರಾಹುಲ್ ಗಾಂಧಿ ಅವರ ಬ್ರಿಟನ್ ಪ್ರವಾಸ ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ ಅವರ ಜೊತೆಗೇ ಇದ್ದ ಕಾಂಗ್ರೆಸ್ ನ ವಿದೇಶ ಸಂಪರ್ಕ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡಾ ಆಡಳಿತ ಪಕ್ಷದ ನಾಯಕರಿಂದ ರಾಹುಲ್ ಗಾಂಧಿ ವಿರುದ್ಧ ನಡೆಯುತ್ತಿರುವ ವಾಗ್ದಾಳಿಗಳಿಗೆ ಪ್ರತಿಯಾಗಿ ತಮ್ಮ ನಾಯಕನನ್ನು ಸಮರ್ಥಿಸಿಕೊಳ್ಳುವ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಲಂಡನ್ ನಲ್ಲಿ ರಾಹುಲ್ ಗಾಂಧಿ ಅವರು ಹೇಳಿದ್ದರ ಬಗ್ಗೆ ಸುಳ್ಳು ಪ್ರಚಾರವನ್ನು ನಿಲ್ಲಿಸಿ, ನೀವು ಅಲ್ಲಿ ಇದ್ರಾ? ನೀವು ವೀಡಿಯೋ ನೋಡಿದ್ದೀರಾ? ಅವರು ಹೇಳಿದ್ದೇನು ಎಂಬುದು ನಿಮಗೆ ನಿಜವಾಗಿ ತಿಳಿದಿದೆಯಾ? ಅವರು ಹೇಳಿದ್ದ ಆ ಪ್ರಸಂಗ, ಮುಖ್ಯ ಸಂದೇಶ ಏನು ಅಂತ ತಿಳಿದಿದೆಯಾ? ಎಂದು ಪ್ರಶ್ನಿಸಿರುವ ಸ್ಯಾಮ್ ಪಿತ್ರೋಡಾ, ಸ್ಪಷ್ಟನೆ ನೀಡುವುದಕ್ಕಾಗಿ ಈ ಅಂಶಗಳನ್ನು ಪರಿಗಣಿಸಿ ಎಂದು ಹೇಳಿದ್ದಾರೆ.
1. ಭಾರತದ ಪ್ರಜಾಪ್ರಭುತ್ವ ಜಾಗತಿಕ ಸಾರ್ವಜನಿಕ ಅಂಶವನ್ನು ಹೊಂದಿರುವುದಾಗಿದೆ. 2. ಭಾರತದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಕಳವಳವಿದೆ. 3. ಇದು ಭಾರತದ ಸಮಸ್ಯೆಯಾಗಿದ್ದು, ನಾವು ಇದರೊಂದಿಗೆ ವ್ಯವಹರಿಸುತ್ತೇವೆ. ಎಂದು ಹೇಳಿರುವುದಾಗಿ ಪಿತ್ರೋಡಾ ಹೇಳಿದ್ದಾರೆ.
ಇದಷ್ಟೇ ಅಲ್ಲದೇ ರಾಹುಲ್ ಗಾಂಧಿ ಸಹಾಯಕ್ಕಾಗಿ ಯಾವುದೇ ವಿದೇಶಗಳನ್ನೂ ಆಹ್ವಾನಿಸಿಲ್ಲ ಎಂದೂ ಪಿತ್ರೋಡಾ ಸಮರ್ಥನೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವ 'ನಾಶ' ಮಾಡುತ್ತಿರುವವರ ಬಾಯಲ್ಲಿ ರಕ್ಷಣೆಯ ಮಾತು: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ನಾನು ಓರ್ವ ತಾರ್ಕಿಕ, ತರ್ಕಬದ್ಧ, ಮುಕ್ತ ಮನಸ್ಸು, ಕಣ್ಣುಗಳು ಮತ್ತು ಕಿವಿಗಳನ್ನು ಹೊಂದಿರುವ ಭಾರತೀಯ ವೃತ್ತಿಪರನಾಗಿ ಆ ಕಾರ್ಯಕ್ರಮದಲ್ಲಿದ್ದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದು, ಮಾಧ್ಯಮಗಳೊಂದಿಗೆ ಸೇರಿ ಚುನಾಯಿತ ನಾಯಕರ ಮೂಲಕ ಸುಳ್ಳು ಮತ್ತು ತಪ್ಪು ಮಾಹಿತಿಯ ಆಧಾರದ ಮೇಲೆ ಸುಸಂಘಟಿತ ವೈಯಕ್ತಿಕ ದಾಳಿ ನಡೆಸುವುದರ ಅರ್ಥವೇನು? ಇದೇನಾ ಭಾರತದ ಪ್ರಜಾಪ್ರಭುತ್ವವೆಂದರೆ? ರಾಜಕೀಯ ಸಂವಾದ, ಚರ್ಚೆಗಳಲ್ಲಿ ಸಭ್ಯತೆ ಉಳಿದಿದೆಯೇ? ಎಂದು ಪಿತ್ರೋಡಾ ಪ್ರಶ್ನಿಸಿದ್ದಾರೆ.
Pls, stop promoting and propagating lies about what @RahulGandhi said in #London.
— Sam Pitroda (@sampitroda) March 14, 2023
Were you there?
Did you see the video?
Do you really know what he said?
In what context?
What was the main message?#RahulGandhiInLondon
ಕೆಲವು ಮಂದಿ ಒಟ್ಟುಗೂಡಿ ಸುಳ್ಳುಗಳನ್ನು ಪ್ರಚಾರ ಮಾಡಿ, ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸುತ್ತಿರುವುದೇಕೆ? ಅದಕ್ಕಿಂತಲೂ ಉದ್ಯೋಗ ಸೃಷ್ಟಿ, ಆರ್ಥಿಕ ಸುಧಾರಣೆಗಳು, ಹಿಂಸಾಚಾರಕ್ಕೆ ಕಡಿವಾಣ ಹಾಕುವುದು, ಪರಿಸರವನ್ನು ಸುಧಾರಿಸುವುದು, ಶಿಕ್ಷಣ, ಆರೋಗ್ಯ ಸೇವೆಗಳ ಸುಧಾರಣೆಯಂತಹ ಪ್ರಮುಖ ಅಂಶಗಳತ್ತ ಗಮನ ಹರಿಸಬಹುದು ಎಂದು ಪಿತ್ರೋಡಾ ಟ್ವೀಟ್ ನಲ್ಲಿ ಬರೆದಿದ್ದಾರೆ.
ಇದೇ ವೇಳೆ ಮಾಧ್ಯಮಗಳನ್ನೂ ಪ್ರಶ್ನಿಸಿರುವ ಪಿತ್ರೋಡಾ, ರಾಹುಲ್ ಗಾಂಧಿ ವಿಷಯವಾಗಿ ರಾಷ್ಟ್ರೀಯ ಮಾಧ್ಯಮಗಳು ಏಕೆ ಇಷ್ಟೊಂದು ಸಮಯ, ಹಣ, ಶ್ರಮವನ್ನು ವ್ಯಯಿಸುತ್ತಿವೆ? ವಾಸ್ತವಗಳನ್ನು ಪರಿಶೀಲಿಸದೇ ರಾಹುಲ್ ಗಾಂಧಿ ವಿಷಯವಾಗಿ ಏಕಾ ಏಕಿ ಮುಗಿಬೀಳುವುದೇಕೆ? ಅವರು ಸಾಧಿಸಲು ಉದ್ದೇಶಿಸುವುದಾದರೂ ಏನು? ಇದು ನ್ಯಾಯವೇ? ಎಂದು ಪಿತ್ರೋಡಾ ಪ್ರಶ್ನಿಸಿದ್ದಾರೆ.