ಮಹಾರಾಷ್ಟ್ರ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 12 ಲಕ್ಷ ರೂ. ವಂಚನೆ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ 12 ಲಕ್ಷ 47 ಸಾವಿರ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಥಾಣೆ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ 12 ಲಕ್ಷ 47 ಸಾವಿರ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಕಪೂರಬಾವಡಿ ಪೊಲೀಸರು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420(ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಕಳೆದ ನವೆಂಬರ್ 2022 ರಲ್ಲಿ ಸಂತ್ರಸ್ತ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದರು. ಆ ವ್ಯಕ್ತಿ ತಾನು ಮಲೇಷ್ಯಾದವನು, ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ನಂತರ ಆರೋಪಿಯು ಆ ಮಹಿಳೆಗೆ ತಾನು ಉಡುಗೊರೆಯೊಂದನ್ನು ಕಳುಹಿಸಿರುವುದಾಗಿ ತಿಳಿಸಿದ್ದು, ಅದರಲ್ಲಿ ಒಂದಷ್ಟು ಡಾಲರ್ ಇದೆ ಎಂದು ಹೇಳಿದ್ದಾನೆ. ನಂತರ ಗೆಳೆಯ ಕಳುಹಿಸಿದ ಗಿಫ್ಟ್ ಪಡೆಯಲು ಉತ್ಸುಕಳಾಗಿದ್ದ ಮಹಿಳೆಗೆ ದೆಹಲಿಯ ಕಸ್ಟಮ್ಸ್ ಅಧಿಕಾರಿ ಮಾತನಾಡುತ್ತಿರುವುದಾಗಿ ಯುವತಿಯೊಬ್ಬಳು ಕರೆ ಮಾಡಿ, ನಿಮಗೆ ವಿದೇಶದಿಂದ ಉಡುಗೊರೆ ಬಂದಿದ್ದು, ಅದನ್ನು ಪಡೆಯಲು ಕಸ್ಟಮ್ಸ್ ಶುಲ್ಕ ನೀಡಬೇಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಕರೆ ಮಾಡಿದ ಯುವತಿಗೆ ಹಲವು ಬಾರಿ ಹಣ ಕಳುಹಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳೆ ಒಟ್ಟು 12.47 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ. ಆದರೆ ಪದೇಪದೆ ಹಣ ಕಳುಹಿಸಿದರೂ ಉಡುಗೊರೆ ಬಂದಿಲ್ಲ. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com