ರಾಹುಲ್ ಗಾಂಧಿಗೆ ಕೋರ್ಟ್ 2 ವರ್ಷ ಜೈಲು ಶಿಕ್ಷೆ: ಕಾಂಗ್ರೆಸ್ ನಾಯಕನಿಗೆ ಅನರ್ಹತೆ ಭೀತಿ! ಸದ್ಯಕ್ಕಿಲ್ಲ ಆತಂಕ ಎಂದ ಸಂವಿಧಾನ ತಜ್ಞರು
ಎಲ್ಲ ವಂಚಕರ ಉಪನಾಮ ಮೋದಿಯಾಗಿರುತ್ತದೆ ಎಂದು ಹೇಳಿಕೆ ನೀಡಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಅನರ್ಹತೆ ಭೀತಿ ಎದುರಿಸುತ್ತಿದ್ದು, ಈ ಬಗ್ಗೆ ಸಂವಿಧಾನ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Published: 23rd March 2023 11:13 PM | Last Updated: 24th March 2023 05:59 PM | A+A A-

ರಾಹುಲ್ ಗಾಂಧಿ
ತಿರುವನಂತಪುರಂ: ಎಲ್ಲ ವಂಚಕರ ಉಪನಾಮ ಮೋದಿಯಾಗಿರುತ್ತದೆ ಎಂದು ಹೇಳಿಕೆ ನೀಡಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಅನರ್ಹತೆ ಭೀತಿ ಎದುರಿಸುತ್ತಿದ್ದು, ಈ ಬಗ್ಗೆ ಸಂವಿಧಾನ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮೋದಿ ಉಪನಾಮದ ಕುರಿತು ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಕೋರ್ಟ್ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿದ್ದು, ಅವರು ಸಂಸದ ಸ್ಥಾನದಿಂದ ಅನರ್ಹರಾಗಲಿದ್ದಾರೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಜನತಾ ಪ್ರಾತಿನಿಧ್ಯ ಕಾಯಿದೆ 1951 ರ ಪ್ರಕಾರ, ಕ್ರಿಮಿನಲ್ ಪ್ರಕರಣದಲ್ಲಿನ ಶಿಕ್ಷೆಯು ತ್ವರಿತ ಅನರ್ಹತೆಗೆ ಕಾರಣವಾಗುತ್ತದೆ. ಆದಾಗ್ಯೂ, ಸಂವಿಧಾನದ 103 ನೇ ವಿಧಿಯು, ಸಂಸತ್ತಿನ ಸದಸ್ಯರು ಅನರ್ಹತೆಗೆ ಒಳಪಡುತ್ತಾರೆಯೇ ಎಂಬುದರ ಕುರಿತು ಅಧ್ಯಕ್ಷರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಇದೇ ಅಂಶ ರಾಹುಲ್ ಗಾಂಧಿಗೆ ಕೊಂಚ ನೆಮ್ಮದಿ ತಂದಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಸತ್ಯ ಹೇಳಿದ್ದಕ್ಕೆ ಜೈಲು ಶಿಕ್ಷೆ; ತೀರ್ಪು ಪ್ರಶ್ನಿಸಿ ಮೇಲ್ಮನವಿ: ಕಾಂಗ್ರೆಸ್
ಮತ್ತೊಂದು ವಿಚಾರ ಎಂದರೆ ಪ್ರಸ್ತುತ ಶಿಕ್ಷೆ ಪ್ರಕಟಿಸಿರುವ ಸೂರತ್ ನ್ಯಾಯಾಲಯ ಕೆಳಹಂತದ ನ್ಯಾಯಾಲಯವಾಗಿದ್ದು, ಈ ಕುರಿತು ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೂಡ ನೀಡಲಾಗಿದೆ. ಅಲ್ಲದೆ ರಾಹುಲ್ ಗಾಂಧಿ ಪರ ವಕೀಲರು ಕೂಡ ಸೂರತ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಉನ್ನತ ಮಟ್ಟದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆಗಳಿಗೆ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ. ಇದೇ ಕಾರಣಕ್ಕೆ ಸಂವಿಧಾನ ತಜ್ಞರು ರಾಹುಲ್ ಗಾಂಧಿ ಅನರ್ಹತೆ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಲಿದೆ ಎಂದು ಹೇಳಿದ್ದಾರೆ.
ಸಂವಿಧಾನ ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರು ಈ ಬಗ್ಗೆ ಮಾತನಾಡಿದ್ದು, 'ಈ ವಿಷಯವು ವ್ಯಾಖ್ಯಾನಕ್ಕೆ ಮುಕ್ತವಾಗಿದೆ. ಕಾನೂನಿನ ಪ್ರಕಾರ, ಒಬ್ಬ ಸದಸ್ಯ ತಪ್ಪಿತಸ್ಥನೆಂದು ಸಾಬೀತಾದರೆ ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾದರೆ, ತಕ್ಷಣವೇ ಅವನನ್ನು ಅನರ್ಹಗೊಳಿಸಲಾಗುತ್ತದೆ. ಆದರೆ ರಾಹುಲ್ ಗಾಂಧಿ ಪ್ರಕರಣದಲ್ಲಿ ಜನಪ್ರತಿನಿಧಿ ಕಾಯ್ದೆಯಡಿ ಹಾಲಿ ಸದಸ್ಯರಿಗೆ ಮೂರು ತಿಂಗಳ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಅವರು ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿಯನ್ನು ವಿಲೇವಾರಿ ಮಾಡಿದರೆ, ಅನರ್ಹತೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ: ಪಿತೂರಿ ಎಂದ ಕೇಜ್ರಿವಾಲ್!
2013 ರಲ್ಲಿ, ಲಿಲಿ ಥಾಮಸ್ ಪ್ರಕರಣವನ್ನು ಪರಿಗಣಿಸುವಾಗ, ಸುಪ್ರೀಂ ಕೋರ್ಟ್ ಮೂರು ತಿಂಗಳ ಅವಧಿಯನ್ನು ಅಸಂವಿಧಾನಿಕವೆಂದು ಹೇಳಿತ್ತು. ಅಲ್ಲದೆ ಅದನ್ನು ರದ್ದುಗೊಳಿಸಿತ್ತು. ಅಂದರೆ ಶಿಕ್ಷೆ ಪ್ರಕಟವಾದ ಕೂಡಲೇ ಅನರ್ಹತೆಯ ಅವಧಿ ಪ್ರಾರಂಭವಾಗುತ್ತದೆ. ಇದೇ ಅಂಶವನ್ನು ಪಿಡಿಟಿ ಆಚಾರಿ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದು, ಇದಲ್ಲದೇ ಇನ್ನೂ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. "ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಲು ಹೋದರೆ ಮತ್ತು ಮೇಲ್ಮನವಿ ನ್ಯಾಯಾಲಯವು ಆದೇಶಕ್ಕೆ ತಡೆ ನೀಡಿದರೆ, ಇದರರ್ಥ ಅನರ್ಹತೆಯನ್ನು ಅಮಾನತುಗೊಳಿಸಲಾಗಿದೆ. ಹತ್ತು ದಿನಗಳ ಅಂತರವಿದೆ ಎಂದು ಭಾವಿಸೋಣ, ಆ ದಿನಗಳಲ್ಲಿ ಅವರು ಸದಸ್ಯರಾಗಿ ಉಳಿಯುತ್ತಾರೆಯೇ ಅಥವಾ ಇಲ್ಲವೇ - ಅದು ಸ್ಪಷ್ಟವಾಗಿಲ್ಲ" ಎಂದು ಅವರು ಹೇಳಿದರು. .
ಇದೇ ವೇಳೆ ಆಚಾರಿ ಅವರು ಮತ್ತೊಂದು ಸಾಂವಿಧಾನಿಕ ನಿಬಂಧನೆಯನ್ನು ಸಹ ಗಮನಿಸಿದ್ದು, ಆರ್ಟಿಕಲ್ 103 ರ ಅಡಿಯಲ್ಲಿ, ಸಂಸತ್ತಿನ ಯಾವುದೇ ಸದನದ ಹಾಲಿ ಸದಸ್ಯರು ಅನರ್ಹತೆಗೆ ಒಳಪಟ್ಟಿದ್ದಾರೆಯೇ ಎಂದು ಅಧ್ಯಕ್ಷರು ಘೋಷಿಸಬೇಕು. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಅನರ್ಹತೆಯ ಬಗ್ಗೆ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವ್ಯಕ್ತಿ ಅನರ್ಹನಾಗಿದ್ದಾನೆಯೇ ಅಥವಾ ಇಲ್ಲವೇ ಎಂದು ಯಾರಾದರೂ ರಾಷ್ಟ್ರಪತಿಯನ್ನು ಸಂಪರ್ಕಿಸಿದರೆ, ಅಧ್ಯಕ್ಷರು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಅದನ್ನು ಪರಿಶೀಲಿಸಬೇಕು. ಕೇಂದ್ರ ಚುನಾವಣಾ ಆಯೋಗ ತನ್ನ ಅಭಿಪ್ರಾಯವನ್ನು ನೀಡುತ್ತದೆ ಮತ್ತು ಅಧ್ಯಕ್ಷರು ಅದಕ್ಕೆ ಬದ್ಧರಾಗಿರಬೇಕು. ಹಾಲಿ ಪ್ರಕರಣದಲ್ಲಿ, ಸ್ವಯಂಚಾಲಿತ ಅನರ್ಹತೆ ನಡೆಯುವುದಿಲ್ಲ. ಆದರೆ ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಲ್ಲ. ಇದು ಅಸ್ಪಷ್ಟತೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ವಿಚಾರಣಾ ನ್ಯಾಯಾಲಯವೇ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ. ಅನರ್ಹತೆಯು ಶಿಕ್ಷೆಯ ಅವಧಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ತಾರ್ಕಿಕವಾಗಿ ಶಿಕ್ಷೆಯನ್ನು ಅಮಾನತುಗೊಳಿಸಿದರೆ, ಅನರ್ಹಗೊಳಿಸುವ ಪ್ರಕ್ರಿಯೆ ಕೂಡ ಸ್ವಯಂಚಾಲಿತವಾಗಿ ಅಮಾನತುಗೊಳ್ಳುತ್ತದೆ ಎಂದು ಆಚಾರಿ ಅವರು ಅಭಿಪ್ರಾಪಟ್ಟಿದ್ದಾರೆ.
ಇದನ್ನೂ ಓದಿ: ಸತ್ಯವೇ ನನ್ನ ದೇವರು: ಮಾನನಷ್ಟ ಮೊಕದ್ದಮೆ ತೀರ್ಪು ಕುರಿತು ರಾಹುಲ್ ಪ್ರತಿಕ್ರಿಯೆ; ಲೋಕಸಭಾ ಸದಸ್ಯತ್ವ ಅನರ್ಹ ಸಾಧ್ಯತೆ
ಏನಿದು ಲಿಲಿ ಥಾಮಸ್ ಹಾಗೂ ಭಾರತ ಸರ್ಕಾರ ಪ್ರಕರಣ?
ಜನಪ್ರತಿನಿಧಿಯೊಬ್ಬರು ಪ್ರಕರಣವೊಂದರಲ್ಲಿ ಕನಿಷ್ಠ 2 ವರ್ಷ ಜೈಲು ಶಿಕ್ಷಗೆ ಗುರಿಯಾಗಿದ್ದೇ ಆದಲ್ಲಿ, ಅವರ ಸದಸತ್ವವು ತಕ್ಷಣಕ್ಕೆ ಜಾರಿಗೆ ಬರುವಂತೆ ಅನರ್ಹಗೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ 2013ರಲ್ಲಿ (ಲಿಲಿ ಥೋಮಸ್ ಹಾಗೂ ಭಾರತ ಸರ್ಕಾರ ಪ್ರಕರಣ) ತೀರ್ಪು ನೀಡಿತ್ತು. ಇದರ ಜತೆಗೆ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿ ತಮ್ಮೆಲ್ಲಾ ಕಾನೂನು ಹೋರಾಟ ಮುಗಿಯುವವರೆಗೂ (ಸುಪ್ರೀಂ ಕೋರ್ಟ್ ತೀರ್ಪಿನವೆರಗೂ) ಜನಪ್ರತಿನಿಧಿಯಾಗಿ ಮುಂದುವರಿಯಬಹುದು. ಹಾಗೂ ಶಿಕ್ಷೆ ಪ್ರಕಟದ ಬಳಿಕ ಮೂರು ತಿಂಗಳವರೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎನ್ನುವ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ಗಳನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳು ತಕ್ಷಣವೇ ಅನರ್ಹಗೊಳ್ಳುತ್ತಾರೆ ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧವಾಗಿ, ಅಂದಿನ ಕಾನೂನು ಸಚಿವ ಕಪಿಲ್ ಸಿಬಲ್ ಅವರು ರಾಜ್ಯಸಭೆಯಲ್ಲಿ ಹೊಸ ಮಸೂದೆ ಮಂಡಿಸಿದ್ದರು. ಶಿಕ್ಷೆ ಪ್ರಕಟವಾದ ಕೂಡಲೇ ಅನರ್ಹತೆ ಜಾರಿಯಾಗುವುದಿಲ್ಲ ಎನ್ನುವ ಅಂಶ ಅದರಲ್ಲಿ ಇತ್ತು. ಈ ನಡುವೆ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಅದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಇದನ್ನೂ ಓದಿ: 'ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ' ಎಂದಿದ್ದ ರಾಹುಲ್ ಗಾಂಧಿ ದೋಷಿ; ಸೂರತ್ ನ್ಯಾಯಾಲಯ ತೀರ್ಪು, 2 ವರ್ಷ ಜೈಲು ಶಿಕ್ಷೆ
ಇದಾದ ಬಳಿಕ ಮೇವು ಹಗರಣದ ತೀರ್ಪು ಬರುವುದಕ್ಕೂ ಕೆಲ ದಿನಗಳ ಮುಂಚೆ, ಸುಪ್ರೀ ಕೋರ್ಟ್ ತೀರ್ಪಿನ ವಿರುದ್ಧ ತರಲು ಉದ್ದೇಶಿಸಲಾಗಿದ್ದ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಈ ವೇಳೆ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು, ಪತ್ರಿಕಾಗೋಷ್ಠಿ ನಡೆಸಿ ‘ಇದು ಸಂಪೂರ್ಣ ಅಸಂಬದ್ಧವಾಗಿದೆ. ಅದನ್ನು ಹರಿದು ಬಿಸಾಡಬೇಕು‘ ಎಂದು ಸುಗ್ರೀವಾಜ್ಞೆ ವಿರುದ್ಧ ಗುಡುಗಿದ್ದರು. ಇದಾದ ಐದು ದಿನಗಳ ಬಳಿಕ ಸರ್ಕಾರ ಸುಗ್ರೀವಾಜ್ಞೆ ಮಸೂದೆಯನ್ನು ಹಿಂಪಡೆದಿತ್ತು. ಇದೀಗ ಅದೇ ಕಾನೂನು ರಾಹುಲ್ ಗಾಂಧಿ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
ಅನರ್ಹರಾದರೆ ಮುಂದೇನು?
ಒಂದು ವೇಳೆ ರಾಹುಲ್ ಗಾಂಧಿ ಅನರ್ಹರಾದರೆ, ಅವರು ಪ್ರತಿನಿಧಿಸುತ್ತಿರುವ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಕ್ರಿಮಿನಲ್ ಅಪರಾಧಗಳಲ್ಲಿ ಸದಸ್ಯತ್ವ ಕಳೆದುಕೊಂಡ ಜನಪ್ರತಿನಿಧಿ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಹೀಗಾಗಿ ರಾಹುಲ್ ಗಾಂಧಿಗೆ ಐದು ವರ್ಷ ಸ್ಪರ್ಧೆ ಮಾಡುವ ಅವಕಾಶ ಇಲ್ಲ. ಮೇಲ್ಮನವಿ ಸಲ್ಲಿಸಿದರೆ, ಹೈ ಕೋರ್ಟ್ ತೀರ್ಪಿನ ಮೇಲೆ ಉಳಿದ ಪ್ರಕ್ರಿಯೆಗಳು ನಿರ್ಧಾರವಾಗಲಿದೆ.