ಬಿಜೆಪಿಯಿಂದ ಜಾತಿ ರಾಜಕಾರಣ; ನೀರವ್, ಲಲಿತ್ ಮೋದಿಯನ್ನು ಸಮರ್ಥಿಸಿಕೊಳ್ಳುತ್ತಿದೆ: ಕಾಂಗ್ರೆಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸಿದ್ದಾರೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,...
Published: 24th March 2023 03:30 PM | Last Updated: 24th March 2023 06:15 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸಿದ್ದಾರೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಮತ್ತು ಆಡಳಿತ ಪಕ್ಷ ನೀರವ್ ಮೋದಿ ಹಾಗೂ ಲಲಿತ್ ಮೋದಿಯಂತಹ ಪಲಾಯನವಾದಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.
"ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸುವ ಮೂಲಕ, ರಾಹುಲ್ ಗಾಂಧಿ ಅವರು ತಮ್ಮ ಜಾತಿವಾದಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಆದಾಗ್ಯೂ, ಅವರ ಇತ್ತೀಚಿನ ಟೀಕೆ ಆಶ್ಚರ್ಯವೇನಿಲ್ಲ. ಕಳೆದ ಹಲವು ವರ್ಷಗಳಿಂದ ಅವರು ರಾಜಕೀಯ ಭಾಷಣದ ಗೌರವವನ್ನೇ ಕಡಿಮೆ ಮಾಡಿದ್ದಾರೆ" ಎಂದು ನಡ್ಡಾ ಹೇಳಿದ್ದರು.
ಇದನ್ನು ಓದಿ: ಕಂಟಕವಾಯ್ತು ಮಾನಹಾನಿ ಪ್ರಕರಣ: ವಯನಾಡು ಕಾಂಗ್ರೆಸ್ ಸಂಸದರಿಗೆ ಬಿಗ್ ಶಾಕ್: ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ
ನಡ್ಡಾ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಖರ್ಗೆ, "ಮೋದಿ ಸರ್ಕಾರ ಜೆಪಿಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ! ನೀರವ್ ಮೋದಿ, ಲಲಿತ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಸಾರ್ವಜನಿಕರ ಹಣ ಕೊಳ್ಳೆ ಹೊಡೆದು ಓಡಿಹೋಗಿದ್ದಾರೆ. ಆದರೆ ಒಬಿಸಿಗಳು ಹಾಗೆ ಮಾಡಿಲ್ಲ ಅಂದಮೇಲೆ ಅವರನ್ನು ಅವಮಾನಿಸಲಾಗಿದೆ ಅಂತ ಹೇಗೆ ಹೇಳುತ್ತೀರಿ?" "ನಿಮ್ಮ 'ಬೆಸ್ಟ್ ಫ್ರೆಂಡ್' ನಿಂದಾಗಿ SBI/LIC ನಷ್ಟ ಅನುಭವಿಸಿದೆ!" ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"'ಏಕ್ ತೋ ಚೋರಿ ಮೇ ಸಹೋಗ್ ಫಿರ್ ಜಾತಿಗತ್ ರಾಜನೀತಿ ಕಾ ಪ್ರಯೋಗ್' (ಮೊದಲು ಕಳ್ಳರಿಗೆ ಓಡಿಹೋಗಲು ಸಹಾಯ ಮಾಡಿ ಈಗ ಜಾತಿ ರಾಜಕೀಯ ಮಾಡುತ್ತಿದ್ದೀರಿ)" ಇದು "ನಾಚಿಕೆಗೇಡಿನ" ಸಂಗತಿ ಎಂದು ಖರ್ಗೆ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.