ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ನಾನು ಬಂಗಲೆ ಖಾಲಿ ಮಾಡುತ್ತೇನೆ: ಪತ್ರ ಬರೆದ ರಾಹುಲ್ ಗಾಂಧಿ

ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹರಾದ ಬೆನ್ನಲ್ಲೇ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹರಾದ ಬೆನ್ನಲ್ಲೇ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಸೋಮವಾರ ಲೋಕಸಭಾ ಕಾರ್ಯದರ್ಶಿ ತುಘಲಕ್‌ ಲೇನ್‌ನಲ್ಲಿ ರಾಹುಲ್‌ ಗಾಂಧಿ ವಾಸವಾಗಿರುವ 12ನೇ ಸಂಖ್ಯೆಯ ಸರ್ಕಾರಿ ಬಂಗಲೆಯನ್ನು ಏಪ್ರಿಲ್‌ 23ರೊಳಗೆ ಖಾಲಿ ಮಾಡಿ ಎಂದು ಕಾಂಗ್ರೆಸ್‌ ನಾಯಕನಿಗೆ ನೋಟಿಸ್‌ ನೀಡಿದ್ದರು.

ಇದಕ್ಕೆ ಪತ್ರ ಬರೆದು ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ ನಿಮ್ಮ ನೋಟಿಸ್‌ಗೆ ಬದ್ಧನಾಗಿದ್ದು, ಸರ್ಕಾರಿ ಬಂಗಲೆ ಖಾಲಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಲ್ಲದೇ, ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ, ನಾನು ಇಲ್ಲಿ ಅನೇಕ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ಜನರ ಆದೇಶಕ್ಕೆ ಋಣಿಯಾಗಿದ್ದೇನೆ ಎಂದು ರಾಹುಲ್‌ ಗಾಂಧಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನನ್ನ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ಖಂಡಿತವಾಗಿಯೂ ನಿಮ್ಮ ನೋಟಿಸ್‌ಗೆ ಬದ್ಧನಾಗಿರುತ್ತೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 2005ರಿಂದ ರಾಹುಲ್ ಗಾಂಧಿ ಅವರಿಗೆ ಬಂಗಲೆ ನೀಡಲಾಗಿತ್ತು.  ರಾಹುಲ್ ಗಾಂಧಿ ತುಘಲಕ್‌ ಲೇನ್‌ನಲ್ಲಿರುವ ಸಂಖ್ಯೆ 12ರ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಈಗ ಸಂಸದ ಸ್ಥಾನದಿಂದ ಅನರ್ಹರಾದ ಕಾರಣ  ಆ ನಿವಾಸವನ್ನು ಬಿಡಬೇಕಾದ ಪರಿಸ್ಥಿತಿ ರಾಹುಲ್‌ ಗಾಂಧಿಗೆ ಬಂದಿದೆ.

ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ಗುಜರಾತ್‌ ನ್ಯಾಯಾಲಯ ದೋಷಿ ಎಂದು ಅಭಿಪ್ರಾಯಪಟ್ಟು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಾಗಿ ಮರು ದಿನವೇ ರಾಹುಲ್‌ ಗಾಂಧಿ ವಯನಾಡು ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಅನರ್ಹರಾಗಿ ಎರಡು ದಿನಗಳ ನಂತರ ಲೋಕಸಭಾ ಕಾರ್ಯದರ್ಶಿಯು ಮನೆ ಖಾಲಿ ಮಾಡುವಂತೆ ನೋಟಿಸ್‌ ನೀಡಿದೆ.

ಏತನ್ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ  ಸೂಚಿಸಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com