ರಾಹುಲ್ ಗಾಂಧಿ ಸಾವರ್ಕರ್ ಕುರಿತ ಹೇಳಿಕೆಗೆ ಆಕ್ರೋಶ, ವಿಪಕ್ಷಗಳ ಸಭೆಗೆ ಉದ್ಧವ್ ಗೈರು ಬೆನ್ನಲ್ಲೇ ಪ್ರತಿಪಕ್ಷಗಳ ಹೊಸ 'ಸಂಕಲ್ಪ'

ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ ಎಚ್ಚೆತ್ತಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಾವರ್ಕರ್ ಕುರಿತು ಹೊಸ 'ಸಂಕಲ್ಪ' ಮಾಡಿವೆ.
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ ಎಚ್ಚೆತ್ತಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಾವರ್ಕರ್ ಕುರಿತು ಹೊಸ 'ಸಂಕಲ್ಪ' ಮಾಡಿವೆ.

ಹೌದು..ರಾಹುಲ್ ಗಾಂಧಿ ಅನರ್ಹತೆ ಕುರಿತಂತೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದೊಡ್ಡ ಕಾರ್ಯತಂತ್ರದ ಸಭೆಯಲ್ಲಿ ಇಂತಹುದೊಂದು ಸಂಕಲ್ಪ ಮಾಡಲಾಗಿದೆ. ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಒಕ್ಕೂಟದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಭೆಗೆ ಗೈರಾಗಿದ್ದಾರೆ. ಔತಣಕೂಟದಲ್ಲಿ ಉದ್ಧವ್ ಠಾಕ್ರೆ ಗೈರುಹಾಜರಿಯ ಬಗ್ಗೆ ತೀವ್ರ ಚರ್ಚೆ ನಡೆದಿದೆ ಎನ್ನಲಾಗಿದೆ.

ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರವಾಗಿ ಕ್ಷಮೆ ಕೇಳಲು ನಿರಾಕರಿಸಿದ್ದ ರಾಹುಲ್ ಗಾಂಧಿ, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆಯಾಚಿಸುವುದಿಲ್ಲ," ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯಿಂದ ಕೆರಳಿದ್ದ ಉದ್ಧವ್ ಠಾಕ್ರೆ ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದರು.  ಬಲಪಂಥೀಯ ಐಕಾನ್ ವ್ಯಕ್ತಿಯ ರಾಹುಲ್ ಗಾಂಧಿ ಹೇಳಿಕೆ ಆಕ್ಷೇಪಣೀಯ. ನಮ್ಮ ಆರಾಧ್ಯ ವ್ಯಕ್ತಿಯನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಎಚ್ಚರಿಸಿದ್ದರು.

‘ನಾವು ಒಗ್ಗೂಡಿದ್ದೇವೆ ಎಂದು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ, ನಿಜ, ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿದ್ದೇವೆ. ಆದರೆ ಮೈತ್ರಿಗೆ ಬಿರುಕು ಮೂಡಿಸುವ ಯಾವುದೇ ಹೇಳಿಕೆ ನೀಡಬೇಡಿ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದರು.

ಸಾವರ್ಕರ್ ಕುರಿತು ಪ್ರತಿಪಕ್ಷಗಳ ಹೊಸ 'ಸಂಕಲ್ಪ'
ಇನ್ನು ಉದ್ಧವ್ ಠಾಕ್ರೆ ನಿಲುವಿನ ವಿಚಾರವಾಗಿ ಗಂಭೀರವಾಗಿರುವ ಕಾಂಗ್ರೆಸ್ ಪಕ್ಷ, ಔತಣಕೂಟದ ವೇಳೆ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಸೂಚಿಸಿದೆ. ಆ ಮೂಲಕ ಸಾವರ್ಕರ್ ವಿಚಾರವಾಗಿ ಮೃದುಧೋರಣೆ ತಳೆಯುವ ಕುರಿತು ವಿಪಕ್ಷಗಳ ಸಭೆ ಪರೋಕ್ಷವಾಗಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು-ಟಿಎಂಸಿ ಅಚ್ಚರಿ ಎಂಟ್ರಿ
ರಾಹುಲ್‌ ಗಾಂಧಿ ಅವರ ಅನರ್ಹತೆ ಪ್ರತಿಪಕ್ಷಗಳಲ್ಲಿ ಅಪರೂಪದ ಒಗ್ಗಟ್ಟಿಗೆ ಸಾಕ್ಷಿಯಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತೇನೆ ಎಂದಿದ್ದ ಟಿಎಂಸಿ ನಾಯಕರು ಕೂಡ ಕಾಂಗ್ರೆಸ್‌ನ ಸಭೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ನಡೆದ ದೊಡ್ಡ ಕಾರ್ಯತಂತ್ರದ ಸಭೆಯಲ್ಲಿ ಟಿಎಂಸಿಯ ಪ್ರಸೂನ್‌ ಬ್ಯಾನರ್ಜಿ ಹಾಗೂ ಜವಾಹರ್‌ ಸಿರ್ಕಾರ್‌ ಭಾಗವಹಿಸಿದ್ದು ವಿಪಕ್ಷಗಳ ಅಪರೂಪದ ಒಗ್ಗಟ್ಟಿಗೆ ಸಾಕ್ಷಿಯಾಯಿತು. 

ಕಾಂಗ್ರೆಸ್, ಡಿಎಂಕೆ, ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್, ತೆಲಂಗಾಣದ ಆಡಳಿತಾರೂಢ ಭಾರತ ರಕ್ಷಾ ಸಮಿತಿ, ಆರ್‌ಎಸ್, ಸಿಪಿಎಂ, ಸಿಪಿಐ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಎಂಡಿಎಂಕೆ, ಕೆಸಿ, ಟಿಎಂಸಿ, ಆರ್‌ಎಸ್‌ಪಿ, ಆರ್‌ಜೆಡಿ, ಜೆ & ಕೆ ಎನ್‌ಸಿ ಸದಸ್ಯರು , IUML, VCK, SP, JMM ಸಭೆಯಲ್ಲಿ ಉಪಸ್ಥಿತರಿದ್ದರು.

ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಬಗ್ಗೆ ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಖರ್ಗೆ ನೇತೃತ್ವದ ವಿಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಇತರ ವಿಷಯಗಳಲ್ಲಿ ಅಂತರ ಕಾಪಾಡಿಕೊಂಡರೂ ಇಂತಹ ವಿಷಯಗಳಲ್ಲಿ ಪ್ರತಿಪಪಕ್ಷಗಳು ಒಂದಾಗಬೇಕು ಎಂದು ಟಿಎಂಸಿ ನಾಯಕರು ಹೇಳಿದ್ದಾರೆ. ಟಿಎಂಸಿ ನಾಯಕರ ನಡೆಯನ್ನು ಸ್ವಾಗತಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದೆ ಬರುವವರನ್ನು ಕಾಂಗ್ರೆಸ್‌ ಪಕ್ಷ ಯಾವಾಗಲೂ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com