ಸಾವರ್ಕರ್ ಬಗ್ಗೆ ಮೃದುಧೋರಣೆ ತಾಳುವಂತೆ ಕಾಂಗ್ರೆಸ್‌ಗೆ ಶರದ್ ಪವಾರ್ ಮನವಿ

ವಿಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು...
ಶರದ್ ಪವಾರ್
ಶರದ್ ಪವಾರ್

ನವದೆಹಲಿ: ವಿಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಈ ವಿಷಯದ ಬಗ್ಗೆ ಶಿವಸೇನೆಯ ಕಳವಳವನ್ನು ಕಾಂಗ್ರೆಸ್ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಅಸಮಾಧಾನಕ್ಕೆ ಕಾರಣವಾದ ಸಾವರ್ಕರ್ ವಿರುದ್ಧದ ಟೀಕೆಯನ್ನು ಕಡಿಮೆ ಮಾಡಿ, ಮೃದುಧೋರಣೆ ತಳೆಯುವ ಶರದ್ ಪವಾರ್ ಅವರ ಸಲಹೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ವಿಪಕ್ಷ ನಾಯಕರ ಸಭೆಯಲ್ಲಿ ಪವಾರ್ ಈ ವಿಷಯ ಪ್ರಸ್ತಾಪಿಸಿ, ಮಹಾರಾಷ್ಟ್ರದ ಪೂಜ್ಯ ವ್ಯಕ್ತಿ ಸಾವರ್ಕರ್ ಅವರನ್ನು ಗುರಿಯಾಗಿಸುವುದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ಮೈತ್ರಿಗೆ ಧಕ್ಕೆಯಾಗುತ್ತಂದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸಾವರ್ಕರ್ ಎಂದಿಗೂ ಆರೆಸ್ಸೆಸ್ ಸದಸ್ಯರಾಗಿಲ್ಲ ಎಂದು ರಾಹುಲ್ ಗಾಂಧಿಗೆ ತಿಳಿಸಿದ ಪವಾರ್, ವಿರೋಧ ಪಕ್ಷಗಳ ನಿಜವಾದ ಹೋರಾಟ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯೊಂದಿಗೆ ಎಂದು ಒತ್ತಿ ಹೇಳಿದರು.

ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರವಾಗಿ ಕ್ಷಮೆ ಕೇಳಲು ನಿರಾಕರಿಸಿದ್ದ ರಾಹುಲ್ ಗಾಂಧಿ, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆಯಾಚಿಸುವುದಿಲ್ಲ," ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯಿಂದ ಕೆರಳಿದ್ದ ಉದ್ಧವ್ ಠಾಕ್ರೆ ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದರು.  ಬಲಪಂಥೀಯ ಐಕಾನ್ ವ್ಯಕ್ತಿಯ ರಾಹುಲ್ ಗಾಂಧಿ ಹೇಳಿಕೆ ಆಕ್ಷೇಪಣೀಯ. ನಮ್ಮ ಆರಾಧ್ಯ ವ್ಯಕ್ತಿಯನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಎಚ್ಚರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com