ಎಲ್ಲ ಸರಿಯಾಗಿದೆ, ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತೇವೆ: ಸೋನಿಯಾ, ರಾಹುಲ್ ಭೇಟಿ ಬಳಿಕ ರಾವತ್
ಹಿಂದೂತ್ವವಾದಿ ವಿ ಡಿ ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಬುಧವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು,
Published: 29th March 2023 04:10 PM | Last Updated: 29th March 2023 08:10 PM | A+A A-

ಸಂಜಯ್ ರಾವತ್
ನವದೆಹಲಿ: ಹಿಂದೂತ್ವವಾದಿ ವಿ ಡಿ ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಬುಧವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, "ಎಲ್ಲವೂ ಸರಿಯಾಗಿದೆ" ಎಂದು ಹೇಳಿದ್ದಾರೆ.
"ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದೆ. ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಎಲ್ಲವೂ ಸರಿಯಾಗಿದೆ. ಚಿಂತಿಸಬೇಕಾಗಿಲ್ಲ" ಎಂದು ರಾವತ್ ಟ್ವೀಟ್ ಮಾಡಿದ್ದಾರೆ.
ನಾವು ಎರಡು ದಿನಗಳ ಹಿಂದೆ ವಿ ಡಿ ಸಾವರ್ಕರ್ ಕುರಿತ ಹೇಳಿಕೆಗೆ ಕಳವಳ ವ್ಯಕ್ತಪಡಿಸಿದ್ದೆವು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಪ್ರತಿಪಕ್ಷಗಳ ಸಭೆಗೆ ಹಾಜರಾಗಿರಲಿಲ್ಲ. ಈ ವಿಷಯದ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದು, ಎಲ್ಲವೂ ಸರಿಯಾಗಿದೆ. ಈ ವಿಷಯ ನಮ್ಮ ಪಾಲಿಗೆ ಕೊನೆಯಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನು ಓದಿ: ಸಾವರ್ಕರ್ ಬಗ್ಗೆ ಮೃದುಧೋರಣೆ ತಾಳುವಂತೆ ಕಾಂಗ್ರೆಸ್‌ಗೆ ಶರದ್ ಪವಾರ್ ಮನವಿ
ಮಹಾರಾಷ್ಟ್ರ ಮತ್ತು ದೇಶಾದ್ಯಂತ ಪ್ರತಿಪಕ್ಷಗಳ ಒಗ್ಗಟ್ಟು ಮುಂದುವರಿಯಲಿದೆ. ಇಂದು ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ನಾವು ಭಾಗವಹಿಸುತ್ತೇವೆ ಮತ್ತು ಲೋಕಸಭೆಯಲ್ಲಿನ ಪ್ರತಿಭಟನೆಯಲ್ಲೂ ಭಾಗವಹಿಸುತ್ತೇವೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
"ಎಂವಿಎ ಮೈತ್ರಿಯು ಅಖಂಡವಾಗಿದೆ. ಎಂವಿಎ ಒಡೆಯುತ್ತದೆ ಎಂದು ಯಾರಾದರೂ ಭಾವಿಸಿದರೆ, ಅದು ತಪ್ಪು," ಎಂದು ರಾವತ್ ಹೇಳಿದ್ದಾರೆ.