ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಶಿಕ್ಷೆ ಪ್ರಶ್ನಿಸಿ ಶೀಘ್ರದಲ್ಲಿ ಮೇಲ್ಮನವಿ
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ...
Published: 29th March 2023 03:39 PM | Last Updated: 29th March 2023 08:10 PM | A+A A-

ರಾಹುಲ್ ಗಾಂಧಿ
ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಪಕ್ಷದ ಉನ್ನತ ಕಾನೂನು ಸಲಹೆಗಾರರು ಒಂದು ಅಥವಾ ಎರಡು ದಿನಗಳಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು.
ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಬಗ್ಗೆ ರಾಜಕೀಯವಾಗಿ ಮತ್ತು ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ ಮತ್ತು ಈ ವಿಚಾರವನ್ನು ಜನರ ಮುಂದೆಯೂ ಕೊಂಡೊಯ್ಯುವುದಾಗಿ ಹೇಳಿದೆ.
ಈ ಬಾರಿಯ ಬಜೆಟ್ ಅಧಿವೇಶನದಿಂದ ರಾಹುಲ್ ಗಾಂಧಿ ಅವರನ್ನು ದೂರವಿಡಲು ಮಾಡಿದ ಯೋಜಿತ ಪಿತೂರಿ ಇದು. ಸರ್ಕಾರ ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ವಿಪ್ ಮಾಣಿಕಂ ಟ್ಯಾಗೋರ್ ಅವರು ಹೇಳಿದ್ದಾರೆ.