ಏಪ್ರಿಲ್ 1 ರಿಂದ ಮೊಬೈಲ್ ವಾಲೆಟ್ ವಹಿವಾಟುಗಳು ದುಬಾರಿ!: ಇಲ್ಲಿದೆ ನೀವು ತಿಳಿಯಬೇಕಿರುವ ಮಾಹಿತಿ...

ಯುಪಿಐ ನ ವಾಲೆಟ್ ಗಳಿಂದ ನಡೆಸುವ ವಹಿವಾಟುಗಳು, ಪಾವತಿಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. 
ಮೊಬೈಲ್ ವಾಲೆಟ್ ವಹಿವಾಟುಗಳು (ಸಂಗ್ರಹ ಚಿತ್ರ)
ಮೊಬೈಲ್ ವಾಲೆಟ್ ವಹಿವಾಟುಗಳು (ಸಂಗ್ರಹ ಚಿತ್ರ)

ಮುಂಬೈ: ಯುಪಿಐ ನ ವಾಲೆಟ್ ಗಳಿಂದ ನಡೆಸುವ ವಹಿವಾಟುಗಳು, ಪಾವತಿಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. 2,000 ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಪಾವತಿಗಳನ್ನು Prepaid Payment Instruments (ಪಿಪಿಐ)ಗಳ ಮೂಲಕ ಮಾಡುವ ಪ್ರತಿ ಯುಪಿಐ ವಹಿವಾಟುಗಳಿಗೆ ಶೇ.1.1 ರಷ್ಟು ವಿನಿಮಯ ಶುಲ್ಕವನ್ನು ವಿಧಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಶಿಫಾರಸು ಮಾಡಿದೆ. 

ಯುಪಿಐ ನಲ್ಲಿ ವಾಲೆಟ್ ಗಳ ಮೂಲಕ ವ್ಯಾಪಾರಿಗಳಿಗೆ ಪಾವತಿ ಮಾಡುವವರ ಮೇಲೆ ಈ ಶುಲ್ಕ ಪರಿಣಾಮ ಬೀರಲಿದ್ದು, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆಸುವ ವಹಿವಾಟಿನ ಮೇಲೆ ಅಥವಾ ಒಂದೇ ಬ್ಯಾಂಕ್ ಮತ್ತು ಪ್ರಿಪೇಯ್ಡ್ ವ್ಯಾಲೆಟ್ ನಡುವಿನ ವ್ಯಕ್ತಿ-ವ್ಯಾಪಾರಿ ನಡುವಿನ ವಹಿವಾಟುಗಳಿಗೆ ಅನ್ವಯವಾಗುವುದಿಲ್ಲ. 

ವಿನಿಮಯ ಶುಲ್ಕ ಎಂದರೇನು?

ಯಾವುದೇ ವಹಿವಾಟಿನ ಪ್ರಕ್ರಿಯೆಗಾಗಿ ಒಂದು ಬ್ಯಾಂಕ್ ಮತ್ತೊಂದು ವ್ಯಾಂಕ್ ಗೆ ವಿಧಿಸುವ ಶುಲ್ಕವನ್ನು ವಿನಿಮಯ ಶುಲ್ಕ ಅಥವಾ interchange fee ಎಂದು ಹೇಳಲಾಗುತ್ತದೆ.
 
ಪಿಪಿಐ ವಾಲೆಟ್, ಬ್ಯಾಂಕ್ ಖಾತೆಗಳ ನಡುವೆ ಹಾಗೂ ಪಿ2ಪಿ, ಪಿ2ಎಂ ವಹಿವಾಟುಗಳಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ ಎಂದು ಎನ್ ಪಿ ಸಿಐ ಸುತ್ತೋಲೆಯಲ್ಲಿ ತಿಳಿಸಿದೆ. ವಿನಿಮಯ ಶುಲ್ಕ ಏ.1 ರಿಂದ ಜಾರಿಗೆ ಬರಲಿದ್ದು, ಯುಪಿಐ ಪಾವತಿ ವ್ಯವಸ್ಥೆಯ ನಿರ್ವಹಣೆ ಸಂಸ್ಥೆಯಾಗಿರುವ ಎನ್ ಪಿಸಿಐ ಶುಲ್ಕವನ್ನು ಪಡೆಯಲಿದೆ. ಸೆ.30, 2023 ರ ವೇಳೆಗೆ ಈ ಶುಲ್ಕವನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಫೆ.2023 ರ ವರೆಗಿನ 2 ಲಕ್ಷ ಕೋಟಿ ರೂಗಳ ವಾರ್ಷಿಕ ವಾಲೆಟ್ ಪಾವತಿ ವಹಿವಾಟುಗಳ ಆಧಾರದಲ್ಲಿ ಎಲ್ಲಾ ವ್ಯಾಲೆಟ್ ವಿತರಕರಲ್ಲಿ ವ್ಯಾಲೆಟ್ ಲೋಡಿಂಗ್ ಶುಲ್ಕಗಳು ರೂಪಾಯಿ 100 ಕೋಟಿಗಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಸಿಟಿ ರಿಸರ್ಚ್ ಟಿಪ್ಪಣಿಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಯುಪಿಐ ನ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದ್ದು, ಈ ವರ್ಷದ ಜನವರಿಯಲ್ಲಿ ಯುಪಿಐ ನೆಟ್ವರ್ಕ್ ನ ಮೂಲಕ ನಡೆಯುವ ವಹಿವಾಟುಗಳು ಶೇ.1.3 ರಷ್ಟು (13 ಲಕ್ಷ ಕೋಟಿಗೆ) ಏರಿಕೆ ಕಂಡಿದೆ. ಈ ತಿಂಗಳ ಅವಧಿಯಲ್ಲಿ ವಹಿವಾಟುಗಳ ಸಂಖ್ಯೆ ಶೇ.2.6 ರಷ್ಟು (803 ಕೋಟಿ ರೂಪಾಯಿಗಳಿಗೆ) ಹೆಚ್ಚಿದೆ ಎಂದು NPCI ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2022 ರಲ್ಲಿ ಯುಪಿಐ 125.94 ಲಕ್ಷ ಕೋಟಿ ರೂಪಾಯಿ ಮೌಲ್ಯದ 7,400 ಕೋಟಿ ವಹಿವಾಟುಗಳನ್ನು ಕಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com