ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಸಿದ್ಧತೆ ನಡೆಸಿದ್ದ ಪೋಷಕರ ವಿರುದ್ಧವೇ ದೂರು ನೀಡಿದ ಅಪ್ರಾಪ್ತ ಬಾಲಕಿ!
17 ವರ್ಷದ ಯುವತಿಯೋರ್ವಳ ತಾನು ಓದುವ ಹಂಬಲದಿಂದ ಧೈರ್ಯ ಮಾಡಿ ಪೋಷಕರ ವಿರುದ್ಧವೇ ಜಿಲ್ಲಾಡಳಿತಕ್ಕೆ ದೂರು ನೀಡಿ ಮದುವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ.
Published: 02nd May 2023 06:57 PM | Last Updated: 02nd May 2023 08:34 PM | A+A A-

ಛಾಯಾ ಕುಮಾರಿ
ರಾಂಚಿ: 17 ವರ್ಷದ ಯುವತಿಯೋರ್ವಳ ತಾನು ಓದುವ ಹಂಬಲದಿಂದ ಧೈರ್ಯ ಮಾಡಿ ಪೋಷಕರ ವಿರುದ್ಧವೇ ಜಿಲ್ಲಾಡಳಿತಕ್ಕೆ ದೂರು ನೀಡಿ ಮದುವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ.
ಛಾಯಾ ಕುಮಾರಿ ಜಿಲ್ಲಾಡಳಿತಕ್ಕೆ ದೂರು ನೀಡಿ ಜೂನ್ 6ರಂದು ನಡೆಯಲಿರುವ ತನ್ನ ಮದುವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಛಾಯಾ ಅವರ ಕಾರ್ಯವನ್ನು ಜಿಲ್ಲಾಡಳಿತವು ಅಭಿನಂದಿಸಿದ್ದು ಅವರ ಕುಟುಂಬವನ್ನು ಸಾರ್ವಜನಿಕ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕಿಸುವುದಾಗಿ ಭರವಸೆ ನೀಡಿದೆ. ಹೀಗಾಗಿ ಆಕೆ ತಮ್ಮ ಅಧ್ಯಯನವನ್ನು ಮುಂದುವರಿಸಬಹುದಾಗಿದೆ.
ಇನ್ನು ಈ ಪ್ರದೇಶದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್(ಕೆಎಸ್‌ಸಿಎಫ್) ಛಾಯಾಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.
ಛಾಯಾ ಅಪ್ರಾಪ್ತ ವಯಸ್ಕಳಾಗಿದ್ದು ತನ್ನ ಅಧ್ಯಯನವನ್ನು ಮುಂದುವರಿಸಲು ಬಯಸುತ್ತಿದ್ದ ಆಕೆ ತನ್ನ ಮದುವೆಯನ್ನು ನಿಲ್ಲಿಸುವಂತೆ ವಿನಂತಿಯೊಂದಿಗೆ ಸುಮಾರು ಒಂದು ವಾರದ ಹಿಂದೆ ನನ್ನ ಬಳಿಗೆ ಬಂದಿದ್ದಳು. ನಾವು ಆಕೆಯ ಪೋಷಕರೊಂದಿಗೆ ಮಾತನಾಡಿದ್ದೇವೆ ಮತ್ತು ಕೆಲವು ಸಮಾಲೋಚನೆಗಳ ನಂತರ, ಅವರ ಮಗಳ ಮದುವೆಯನ್ನು ಇನ್ನೂ ಕೆಲವು ವರ್ಷಗಳವರೆಗೆ ಮುಂದೂಡುವಂತೆ ನಾವು ಅವರಿಗೆ ಮನವರಿಕೆ ಮಾಡಿ ಕೊಟ್ಟೆವು ಎಂದು ಡೊಮ್‌ಚಾಂಚ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಸುನಿಲ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಛಾಯಾಳ ಪೋಷಕರು ಆಕೆ ಎಷ್ಟು ಓದುತ್ತಾಳೆ ಅಲ್ಲಿಯವರೆಗೂ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು. ಇನ್ನು ಛಾಯಾಳ ಧೈರ್ಯವನ್ನು ಮೆಚ್ಚಿದ ಜಿಲ್ಲಾಡಳಿತವು ಕೆಎಸ್‌ಸಿಎಫ್ ಸಹಯೋಗದೊಂದಿಗೆ ಅವಳನ್ನು ಸನ್ಮಾನಿಸಿತು.
ಇದನ್ನೂ ಓದಿ: 2 ಲಕ್ಷ ರೂ. ಸಾಲ ತೀರಿಸದ ಪೋಷಕರು; ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 40 ವರ್ಷದ ವ್ಯಕ್ತಿ
ಛಾಯಾ ಇತರರಿಗೆ ಮಾದರಿಯಾಗಿದ್ದಾರೆ. ಈ ದೇಶದಲ್ಲಿ ಬಾಲ್ಯ ವಿವಾಹವು ಅಪರಾಧವಾಗಿರುವುದರಿಂದ ಅಪ್ರಾಪ್ತ ವಯಸ್ಕರು ವಿರೋಧಿಸಬೇಕು ಎಂಬ ಸಂದೇಶವನ್ನು ಜನರಿಗೆ ನೀಡಿದ್ದಾರೆ ಎಂದು BDO ಹೇಳಿದರು.
ನನ್ನ ಹೆತ್ತವರು ಜೂನ್ 6ರಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ತಿಳಿದು ನನಗೆ ಆಘಾತವಾಯಿತು. ಮೊದಲಿಗೆ, ನಾನು ಅಪ್ರಾಪ್ತೆಯಾಗಿರುವುದರಿಂದ ಮದುವೆಯನ್ನು ಮುಂದೂಡುವಂತೆ ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ ಆದರೆ ಅವರು ಕೇಳಲಿಲ್ಲ. ಅಂತಿಮವಾಗಿ, ನಾನು ಜಿಲ್ಲಾಡಳಿತವನ್ನು ಸಂಪರ್ಕಿಸಲು ನಿರ್ಧರಿಸಿದೆ. ಅದರಂತೆ ಬಿಡಿಒಗೆ ಪತ್ರ ಬರೆದಿದ್ದೆ. ನಂತರ ಅವರು ನನ್ನ ಮನೆಗೆ ಭೇಟಿ ನೀಡಿದರು. ಈ ಸಮಾಜದಲ್ಲಿ ಬಾಲ್ಯ ವಿವಾಹ ಅಪರಾಧ ಎಂದು ನನ್ನ ಪೋಷಕರಿಗೆ ಮನವರಿಕೆ ಮಾಡಿದರು ಎಂದು ಛಾಯಾ ಕುಮಾರಿ ಹೇಳಿದ್ದಾಳೆ.
ಕಾರ್ಯಕ್ರಮ ನಿರ್ವಾಹಕ, ಕೆಎಸ್‌ಸಿಎಫ್ ಗೋವಿಂದ್ ಖಾನಾಲ್ ಮಾತನಾಡಿ, ಬಾಲ್ಯ ವಿವಾಹದ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಿಸಲು ತಮ್ಮ ಸಂಸ್ಥೆ ನಿಯಮಿತವಾಗಿ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ ಎಂದರು.