ಇಲಿ ಕಚ್ಚಿದ ಮಹಿಳೆಗೆ ರೂ .60,000 ಪರಿಹಾರ ನೀಡಿ: ಚಿತ್ರಮಂದಿರಕ್ಕೆ ಗ್ರಾಹಕ ನ್ಯಾಯಲಯ ಸೂಚನೆ!
ಸಿನಿಮಾ ಪ್ರದರ್ಶನದ ವೇಳೆ ಇಲಿ ಕಚ್ಚಿದ 50 ವರ್ಷದ ಮಹಿಳೆಗೆ ರೂ 60,000 ನೀಡುವಂತೆ ಚಿತ್ರಮಂದಿರವೊಂದಕ್ಕೆ ಗ್ರಾಹಕ ನ್ಯಾಯಾಲಯ ಸೂಚನೆ ನೀಡಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿನ ಚಿತ್ರಮಂದಿರವೊಂದಕ್ಕೆ ಗ್ರಾಹಕ ನ್ಯಾಯಾಲಯ ಈ ರೀತಿಯ ಸೂಚನೆ ನೀಡಿದೆ.
Published: 05th May 2023 10:40 PM | Last Updated: 05th May 2023 10:40 PM | A+A A-

ಸಾಂದರ್ಭಿಕ ಚಿತ್ರ
ಗುವಾಹಟಿ: ಸಿನಿಮಾ ಪ್ರದರ್ಶನದ ವೇಳೆ ಇಲಿ ಕಚ್ಚಿದ 50 ವರ್ಷದ ಮಹಿಳೆಗೆ ರೂ 60,000 ನೀಡುವಂತೆ ಚಿತ್ರಮಂದಿರವೊಂದಕ್ಕೆ ಗ್ರಾಹಕ ನ್ಯಾಯಾಲಯ ಸೂಚನೆ ನೀಡಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿನ ಚಿತ್ರಮಂದಿರವೊಂದಕ್ಕೆ ಗ್ರಾಹಕ ನ್ಯಾಯಾಲಯ ಈ ರೀತಿಯ ಸೂಚನೆ ನೀಡಿದೆ.
ಇಲಿ ಕಚ್ಚಿದ ಮಹಿಳೆಗೆ ಮಾನಸಿಕ ಯಾತನೆಯ ಪರಿಹಾರವಾಗಿ ರೂ. 40,000 ಮತ್ತು ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ರೂ. 20,000 ನೀಡುವಂತೆ ಕಾಮ್ರೂಪ್‌ನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಭಾಂಗಗಢ್‌ನ ಗಲೇರಿಯಾ ಚಿತ್ರಮಂದಿರಕ್ಕೆ ನಿರ್ದೇಶಿಸಿದೆ, ಜೊತೆಗೆ ವೈದ್ಯಕೀಯ ಬಿಲ್‌ನ ಮರುಪಾವತಿ 2,282 ರೂ. ಮತ್ತು ವೆಚ್ಚದ ಪ್ರಕ್ರಿಯೆಯಾಗಿ ರೂ. 5,000 ಪಾವತಿಸುವಂತೆ ನಿರ್ದೇಶನ ನೀಡಿದೆ.
2018 ಅಕ್ಟೋಬರ್ 20 ರಂದು ಮಹಿಳೆ ಚಿತ್ರವೊಂದರ ವೀಕ್ಷಣೆಗಾಗಿ ರಾತ್ರಿ 9 ಗಂಟೆಯ ಪ್ರದರ್ಶನಕ್ಕಾಗಿ ತನ್ನ ಕುಟುಂಬದವರೊಂದಿಗೆ ಚಿತ್ರಮಂದಿರಕ್ಕೆ ಹೋಗಿದ್ದರು. ಮಧ್ಯಂತರದಲ್ಲಿ ತನ್ನ ಪಾದಕ್ಕೆ ಏನೋ ಕಚ್ಚಿದಂತಾಗಿ, ರಕ್ತಸ್ರಾವ ಪ್ರಾರಂಭವಾದ ನಂತರ ಚಿತ್ರಮಂದಿರದಿಂದ ಹೊರಗೆ ಓಡಿ ಬಂದಿದ್ದರು ಎಂದು ಆಕೆಯ ಪರ ವಕೀಲರಾದ ಅನಿತಾ ವರ್ಮಾ ಶುಕ್ರವಾರ ಪಿಟಿಐಗೆ ತಿಳಿಸಿದರು.
ಘಟನೆ ನಡೆದಾಗ ಚಿತ್ರಮಂದಿರದವರು ಆಕೆಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡಿಲ್ಲ, ಆಸ್ಪತ್ರೆಗೆ ಸೇರಿಸಲಿಲ್ಲ ಎಂದು ಅವರು ಸಮರ್ಥಿಸಿಕೊಂಡರು. ಆಸ್ಪತ್ರೆಯಲ್ಲಿ ಆರಂಭದಲ್ಲಿ ಆಕೆಗೆ ಏನು ಕಚ್ಚಿದೆ ಎಂದು ವೈದ್ಯರಿಗೆ ಖಚಿತವಾಗದಿದ್ದರಿಂದ ಆಕೆಯನ್ನು ಎರಡು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿತ್ತು, ನಂತರ ಆಕೆಗೆ ಇಲಿ ಕಡಿತಕ್ಕೆ ಚಿಕಿತ್ಸೆ ನೀಡಲಾಗಿತ್ತು ಎಂದು ಅನಿತಾ ವರ್ಮ ತಿಳಿಸಿದರು.
ವೈದ್ಯಕೀಯ ಚಿಕಿತ್ಸೆ ಮತ್ತಿತರ ವೆಚ್ಚಗಳಿಗೆ ತಗಲುವ ಮೊತ್ತದ ಜೊತೆಗೆ ಮಾನಸಿಕ ಯಾತನೆ ನೋವು ಮತ್ತು ಸಂಕಟಕ್ಕಾಗಿ 6 ಲಕ್ಷ ರೂಪಾಯಿ ಪರಿಹಾರವನ್ನು ಕೋರಿ ಆ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.