ಮಣಿಪುರ ಹಿಂಸಾಚಾರಕ್ಕೆ ಐಟಿ ಅಧಿಕಾರಿ ಬಲಿ: ಆರ್ಟಿಕಲ್ 355 ಜಾರಿ, ಭದ್ರತೆ ಉಸ್ತುವಾರಿ ವಹಿಸಿಕೊಂಡ ಕೇಂದ್ರ

ಮಣಿಪುರ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂಫಾಲ್‌ನಲ್ಲಿ ನಿಯೋಜನೆಗೊಂಡ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಕಂದಾಯ ಸೇವಾ ಸಂಘ ಶುಕ್ರವಾರ ತಿಳಿಸಿದೆ.
ಮಣಿಪುರ ಹಿಂಸಾಚಾರ
ಮಣಿಪುರ ಹಿಂಸಾಚಾರ

ಗುವಾಹಟಿ: ಮಣಿಪುರ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂಫಾಲ್‌ನಲ್ಲಿ ನಿಯೋಜನೆಗೊಂಡ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಕಂದಾಯ ಸೇವಾ ಸಂಘ ಶುಕ್ರವಾರ ತಿಳಿಸಿದೆ.

"ಇಂಫಾಲ್‌ನಲ್ಲಿ ತೆರಿಗೆ ಸಹಾಯಕರಾದ Sh. ಲೆಟ್ಮಿಂಥಾಂಗ್ ಹಾಕಿಪ್ ಅವರ ಸಾವಿಗೆ ಕಾರಣವಾದ ಹಿಂಸಾಚಾರದ ಭೀಕರ ಕೃತ್ಯವನ್ನು ಸಂಘ ಬಲವಾಗಿ ಖಂಡಿಸುತ್ತದೆ. ಯಾವುದೇ ಸಿದ್ಧಾಂತ ಕರ್ತವ್ಯದಲ್ಲಿದ್ದ ಅಮಾಯಕ ಅಧಿಕಾರಿಯ ಹತ್ಯೆಯನ್ನು ಸಮರ್ಥಿಸುವುದಿಲ್ಲ" ಇತ್ತೀಚಿನ ಟ್ವೀಟ್‌ನಲ್ಲಿ ಸಂಘ ಹೇಳಿದೆ.

ಇನ್ನು ಮಣಿಪುರ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 355ನೇ ವಿಧಿ ಜಾರಿಗೊಳಿಸಿ, ಭದ್ರತೆಯ ಸಂಪೂರ್ಣ ಹೊಣೆ ವಹಿಸಿಕೊಂಡಿದೆ. 

355ನೇ ವಿಧಿಯು ಆಂತರಿಕ ಅಡಚಣೆಗಳು ಮತ್ತು ಬಾಹ್ಯ ಆಕ್ರಮಣಗಳ ವಿರುದ್ಧ ರಾಜ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಕರ್ನಾಟಕ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

ಮಣಿಪುರ ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಗುಪ್ತಚರ) ಅಶುತೋಷ್ ಸಿನ್ಹಾ ಅವರನ್ನು "ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ಮತ್ತು ಸಹಜ ಸ್ಥಿತಿಗೆ ತರಲು" ಒಟ್ಟಾರೆ ಕಾರ್ಯಾಚರಣೆಯ ಕಮಾಂಡರ್ ಆಗಿ ನೇಮಿಸಿದೆ.

ಅಶುತೋಷ್ ಸಿನ್ಹಾ ಅವರು ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿರುವ ಮಾಜಿ ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ ಅವರಿಗೆ ವರದಿ ನೀಡಲಿದ್ದಾರೆ.

ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಗುರುವಾರ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ಅವರನ್ನು ಚಿಕಿತ್ಸೆಗಾಗಿ ಶುಕ್ರವಾರ ದೆಹಲಿಗೆ ಕರೆದೊಯ್ಯಲಾಗಿದೆ.

ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಣಿಪುರಕ್ಕೆ ಪ್ರಯಾಣಿಸುವ ಎರಡು ರೈಲುಗಳನ್ನು ಅಸ್ಸಾಂನಲ್ಲಿ ರೈಲ್ವೆ ಅಧಿಕಾರಿಗಳು ಅಲ್ಪಾವಧಿಯವರೆಗೆ ನಿಲ್ಲಿಸಿದ್ದಾರೆ.

ಶುಕ್ರವಾರ ಕೆಲ ಸಣ್ಣಪುಟ್ಟ ಹಿಂಸಾಚಾರದ ಘಟನೆಗಳು ನಡೆದಿವೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com