ಮಣಿಪುರದಲ್ಲಿ ತೀವ್ರ ಹಿಂಸಾಚಾರ: ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸುವಂತೆ ಸರ್ಕಾರ ಆದೇಶ

ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶಿಸಿದೆ.
ಮಣಿಪುರ ಹಿಂಸಾಚಾರ
ಮಣಿಪುರ ಹಿಂಸಾಚಾರ
Updated on

ಇಂಫಾಲ್‌ (ಮಣಿಪುರ): ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶಿಸಿದೆ.

1973ರ CRPC ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಆದೇಶಕ್ಕೆ ರಾಜ್ಯಪಾಲರು ಸಹಿ ಮಾಡಿದ್ದಾರೆ. ಎಲ್ಲಾ ರೀತಿಯ ಮನವೊಲಿಕೆ ಹಾಗೂ ಎಚ್ಚರಿಕೆ ನಡುವೆಯೂ ಬಗ್ಗದೇ ಹೋದರೆ, ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಗೃಹ ಇಲಾಖೆ ಸೂಚನೆ ನೀಡಿದೆ. ಆದೇಶಗಳನ್ನು ಹೊರಡಿಸಲು ರಾಜ್ಯದ ಮಾಜಿಸ್ಟ್ರೇಟರ್‌ಗಳಿಗೆ ಅಧಿಕಾರ ನೀಡಲಾಗಿದೆ. ಗಲಭೆ ನಿಯಂತ್ರಣಕ್ಕೆ ರ್ಯಾಪಿಡ್ ಆಕ್ಷನ್‌ ಫೋರ್ಸ್‌ ನ 500 ಸಿಬ್ಬಂದಿಯನ್ನು ಇಂಫಾಲ್‌ ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಹಿಂಸಾಚಾರದಿಂದ ಈ ವರೆಗೂ 10 ಮಂದಿ ಸಾವನ್ನಪ್ಪಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಈ ವರೆಗೂ ಸುಮಾರು 9,000 ಜನರನ್ನು ಸ್ಥಳಾಂತರಿಸಲಾಗಿದೆ.

ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿದ ಬಳಿಕ ವಿಡಿಯೋ ಸಂದೇಶ ನೀಡಿದ್ದ ಸಿಎಂ ಬಿರೇನ್ ಸಿಂಗ್, ರಾಜ್ಯದ ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಮನವಿ ಮಾಡಿದರು. ಸಮಾಜದ ಎರಡು ವರ್ಗಗಳ ನಡುವಿನ ತಪ್ಪು ತಿಳುವಳಿಕೆಯಿಂದ ಈ ಘಟನೆಗಳು ನಡೆದಿವೆ ಎಂದರು.

ಗುರುವಾರ ಬೆಳಿಗ್ಗೆ, ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ, ಅರೆಸೇನಾ ಪಡೆಗಳು ಮತ್ತು ಪೊಲೀಸರನ್ನು ಬೆಂಬಲಿಸಲು ಕ್ಷಿಪ್ರ ಕಾರ್ಯಪಡೆಯ ಸುಮಾರು 500 ಸಿಬ್ಬಂದಿಯನ್ನು ಮಣಿಪುರಕ್ಕೆ ಕೇಂದ್ರ ಸರ್ಕಾರ ರವಾನಿಸಿತ್ತು.

ಇಲ್ಲಿಯವರೆಗೆ, 9,000 ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಭದ್ರತಾ ಪಡೆಗಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ.

ಚುರಾಚಂದ್‌ಪುರದಲ್ಲಿ ಸುಮಾರು 5,000 ಜನರು, ಇಂಫಾಲ್ ಕಣಿವೆಯಲ್ಲಿ 2,000 ಜನರನ್ನು ಮತ್ತು ತೆನುಗೋಪಾಲ್ ಜಿಲ್ಲೆಯ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ 2,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಿಸ್ಥಿತಿ ಹತೋಟಿಯಲ್ಲಿಡಲು ಧ್ವಜ ಮೆರವಣಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com