ಕೋಲ್ಕತಾ: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶಾಂತಿ ಮರುಸ್ಥಾಪಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಣಿಪುರದ ಪರಿಸ್ಥಿತಿ ತೀವ್ರ ಕಳವಳವನ್ನುಂಟು ಮಾಡಿದೆ. ಈ ಸಮಯದಲ್ಲಿ ರಾಜಕೀಯ ಮಾಡಬಾರದು. ರಾಜಕೀಯ, ಚುನಾವಣೆಗಳು ಇದ್ದೇ ಇರುತ್ತದೆ. ಆದರೆ, ನಮ್ಮ ಸುಂದರ ರಾಜ್ಯ ಮಣಿಪುರವನ್ನು ಮೊದಲು ರಕ್ಷಿಸಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಾಂತಿ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವಂತೆ ಮಣಿಪುರದ ನಮ್ಮ ಸಹೋದರ ಸಹೋದರಿಯರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶಿಸಿದೆ.
Advertisement