ಕೋಲ್ಕತ್ತ: ದಿ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿನಿಮಾವನ್ನು ನಿಷೇಧಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳವಾಗಿದೆ.
ರಾಜ್ಯದಲ್ಲಿ ದ್ವೇಷದ ಯಾವುದೇ ಘಟನೆಯನ್ನು ತಡೆಯುವುದಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣದ ರಾಜ್ಯದ ಗೌರವಕ್ಕೆ ಧಕ್ಕೆ ಉಂಟು ಮಾಡುವುದಕ್ಕಾಗಿ ತಿರುಚಿದ ಅಂಶಗಳನ್ನೊಳಗೊಂಡ ಸಿನಿಮಾ ದಿ ಕೇರಳ ಸ್ಟೋರಿಯಾಗಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರ ಹೇಳಿದೆ. ಕೇರಳದಲ್ಲಿ ಮತಾಂತರಗೊಂಡು ಇಸ್ಲಾಮಿಕ್ ಉಗ್ರ ಸಂಘಟನೆ ಸೇರ್ಪಡೆಯಾದ ಮಹಿಳೆಯರ ಕಥೆಯನ್ನು ದಿ ಕೇರಳ ಸ್ಟೋರಿ ಹೊಂದಿದ್ದು ಮೇ.೦5 ರಂದು ಬಿಡುಗಡೆಯಾಗಿತ್ತು.
ಬಂಗಾಳದಲ್ಲಿ ಸಿನಿಮಾ ನಿಷೇಧದ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ನಿರ್ಧಾರ ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದು, ಈ ನಿಷೇಧದ ಮೂಲಕ ಬ್ಯಾನರ್ಜಿ ಯಾರನ್ನು ಓಲೈಕೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಅಮಿತ್ ಮಾಲ್ವಿಯಾ ಪ್ರಶ್ನಿಸಿದ್ದಾರೆ.
Advertisement