ಮುಸ್ಲಿಂ ಕೋಟಾ ರದ್ದು: ರಾಜಕೀಯ ಹೇಳಿಕೆ ನೀಡಬಾರದು ಎಂದು ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್, ವಿಚಾರಣೆ ಮುಂದೂಡಿಕೆ

ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಸಹ ಮುಂದೂಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಸಹ ಮುಂದೂಡಿದೆ.

ಮುಂದಿನ ವಿಚಾರಣೆಯವರೆಗೆ ಮೀಸಲಾತಿ ನಿಯಮದಡಿ ಯಾವುದೇ ಪ್ರವೇಶಾತಿ ಅಥವಾ ನೇಮಕಾತಿ ನಡೆಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು.

ಕಳೆದ ತಿಂಗಳು ಏಪ್ರಿಲ್ 25ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮತ್ತೆ ವಿಚಾರಣೆಯನ್ನು ಮುಂದೂಡಿದೆ. ನಾಳೆ ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು ಮತದಾನ ಮುಗಿದು ಫಲಿತಾಂಶ ಬಂದ ಮೇಲೆಯೇ ಇನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಸರ್ಕಾರವು ಈ ಹಿಂದೆ ವಿಚಾರಣೆಯನ್ನು ಮುಂದೂಡುವಂತೆ ಕೋರಿತ್ತು. ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸಿದ ಕರ್ನಾಟಕದ ಆದೇಶದ ಆಧಾರದ ಮೇಲೆ ಯಾವುದೇ ಹೊಸ ನೇಮಕಾತಿಗಳು ಅಥವಾ ಪ್ರವೇಶಗಳನ್ನು ಮಾಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರು ನ್ಯಾಯಪೀಠಕ್ಕೆ ಭರವಸೆ ನೀಡಿದ್ದರು.

ನ್ಯಾಯಪೀಠವು, ಕರ್ನಾಟಕ ಸರ್ಕಾರ ಮತ್ತು ಇತರರಿಗೆ ಅರ್ಜಿಗಳ ಕುರಿತು ನೋಟಿಸ್ ಜಾರಿ ಮಾಡಿ ಈ ಹಿಂದೆ ಸೂಚಿಸಿತ್ತು. ಕಳೆದ ವಾರದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಆದೇಶವು "ತಪ್ಪಾದ ಊಹೆಗಳನ್ನು" ಆಧರಿಸಿದೆ ಎಂದು ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ರಾಜಕೀಯ ನಾಯಕರು ಹೇಳಿಕೆ ನೀಡಬಾರದು: ಕರ್ನಾಟಕದಲ್ಲಿ ಶೇ.4ರಷ್ಟು ಮುಸ್ಲಿಂ ಒಬಿಸಿ ಕೋಟಾವನ್ನು ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಉಪನ್ಯಾಯಾಲಯದ ವಿಷಯಗಳ ಕುರಿತು ರಾಜಕೀಯ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸಾರ್ವಜನಿಕ ಬದುಕಿನಲ್ಲಿರುವವರು ನ್ಯಾಯಾಂಗದಲ್ಲಿ ವಿಚಾರಣೆ ಹಂತದಲ್ಲಿರುವ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಬಾರದು ಎಂದು ಮಂಗಳವಾರ ಹೇಳಿದೆ. 

ಕೋರ್ಟ್ ಆದೇಶ ಜಾರಿಯಲ್ಲಿರುವಾಗ ಒಂದಿಷ್ಟು ಪಾವಿತ್ರ್ಯತೆ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠ ಹೇಳಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಚುನಾವಣಾ ರ್ಯಾಲಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಕೋಟಾ ತೆಗೆದುಹಾಕಿರುವ ಬಗ್ಗೆ ರಾಜಕೀಯ ಲಾಭ ಪಡೆದುಕೊಳ್ಳಲು ಹೇಳಿಕೆ ನೀಡಿದ್ದರು ಎಂದು ಹಿರಿಯ ವಕೀಲ ದುಶ್ಯಂತ್ ದಾವೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನ್ಯಾಯಾಲಯ ಈ ರೀತಿ ಇಂದು ಪ್ರತಿಕ್ರಿಯೆ ನೀಡಿದೆ. 

ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿದ ಕರ್ನಾಟಕ ಸರ್ಕಾರ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪೀಠವು ಮುಂದೂಡಿದ್ದರೂ, ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಸಮಾನವಾಗಿ ಹಂಚಿಕೆ ಮಾಡಿದರೂ ಭರವಸೆಗಳು ಜಾರಿಯಾಗಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇಂದು ವಿಚಾರಣೆಯನ್ನು ಮುಂದೂಡಿರುವುದರಿಂದ ಶೇ 4 ಕೋಟಾವನ್ನು ರದ್ದುಗೊಳಿಸುವ ಆದೇಶವು ಮುಂದಿನ ಆದೇಶಗಳವರೆಗೆ ಮುಂದುವರಿಯುತ್ತದೆ.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಬಿ.ವಿ.ನಾಗರತ್ನ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾಜ್ ಅವರಿದ್ದ ನ್ಯಾಯಪೀಠ, ''ವಿಚಾರಣೆಯು ನ್ಯಾಯಾಲಯದ ಮುಂದೆ ಬಾಕಿ ಇರುವಾಗ ಮತ್ತು ಕರ್ನಾಟಕ ಮುಸ್ಲಿಂ ಕೋಟಾ ಕುರಿತು ನ್ಯಾಯಾಲಯದ ಆದೇಶವಿರುವಾಗ, ಈ ವಿಷಯದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡಬಾರದು, ಇದು ಸೂಕ್ತವಲ್ಲ, ಕೆಲವು ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ"ಎಂದು ಹೇಳಿದರು. 

ಶೇಕಡಾ 4ರಷ್ಟು ಮುಸ್ಲಿಂ ಕೋಟಾವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ''ಕರ್ನಾಟಕದಲ್ಲಿ ಪ್ರತಿನಿತ್ಯ ಗೃಹ ಸಚಿವರು ಶೇಕಡಾ ನಾಲ್ಕು ಮುಸ್ಲಿಂ ಕೋಟಾವನ್ನು ಹಿಂಪಡೆದಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ, ಅಂತಹ ಹೇಳಿಕೆಗಳನ್ನು ಏಕೆ ನೀಡಬೇಕು ಎಂದು ಕೇಳಿದರು. 

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಗೃಹ ಸಚಿವರು ಅಂತಹ ಯಾವುದೇ ಹೇಳಿಕೆ ನೀಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಯಾರಾದರೂ ಧರ್ಮದ ಆಧಾರದ ಮೇಲೆ ಕೋಟಾ ಇರಬಾರದು ಎಂದು ಹೇಳಿದರೆ, ಅದರಲ್ಲಿ ತಪ್ಪೇನಿದೆ ಎಂದು ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com