ಜಮ್ಮು: 'ಕೇರಳ ಸ್ಟೋರಿ' ವಿಚಾರವಾಗಿ ಎರಡು ಗುಂಪಿನ ನಡುವೆ ಘರ್ಷಣೆ, ಐವರು ವಿದ್ಯಾರ್ಥಿಗಳಿಗೆ ಗಾಯ
ಕೇಂದ್ರಾಡಳಿತ ಪ್ರದೇಶ ಜಮ್ಮುವಿನಲ್ಲಿ 'ದಿ ಕೇರಳ ಸ್ಟೋರಿ' ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Published: 15th May 2023 06:34 PM | Last Updated: 15th May 2023 07:35 PM | A+A A-

ಪ್ರತಿಭಟನಾನಿರತ ವಿದ್ಯಾರ್ಥಿಗಳು
ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮುವಿನಲ್ಲಿ 'ದಿ ಕೇರಳ ಸ್ಟೋರಿ' ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು, ಶಾಂತಿ ಕೆಡಿಸಲು ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಹೇಳಿದ್ದಾರೆ.
ಜಮ್ಮುವಿನ "ಜಿಎಂಸಿ ಹಾಸ್ಟೆಲ್ ನ ಕೆಲವು ವಿದ್ಯಾರ್ಥಿಗಳು ಮತ್ತು ಹೊರಗಿನವರ ನಡುವೆ ಮಾರಾಮಾರಿ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ವಿದ್ಯಾರ್ಥಿಯೊಬ್ಬ ವಿವಾದಾತ್ಮಕ ಚಿತ್ರದ ಲಿಂಕ್ ಹಂಚಿಕೊಂಡಾಗ ಬ್ಯಾಚ್‌ಮೇಟ್ ಒಬ್ಬರು ಆಕ್ಷೇಪಿಸಿದ್ದಾರೆ. ಅದಲ್ಲದೇ ಈ ಗುಂಪು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಎಂದು ಹೇಳಿದ್ದಾರೆ. ನಂತರ ಲಿಂಕ್ ಹಂಚಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗೆ ಹಾಸ್ಟೆಲ್‌ನೊಳಗೆ ಹಲ್ಲೆ ನಡೆಸಲಾಗಿದೆ. ಹೊರಗಿನವರೊಂದಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡಿದ್ದರಿಂದ ಗಲಾಟೆ ನಡೆಯಿತು ಎಂದು
ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದರು.
ಇದನ್ನೂ ಓದಿ: 'ದಿ ಕೇರಳ ಸ್ಟೋರಿಗೆ' ಮಧ್ಯಪ್ರದೇಶ, ಯುಪಿ ನಂತರ ಉತ್ತರಾಖಂಡ್ ರಾಜ್ಯದಲ್ಲಿಯೂ ತೆರಿಗೆ ವಿನಾಯಿತಿ!
ಬಲಪಂಥೀಯ ಗುಂಪಿನ ಸದಸ್ಯರು ಹೊರಗಿನವರನ್ನು ಹಾಸ್ಟೆಲ್‌ಗೆ ಕರೆತಂದರಲ್ಲದೇ, ಧಾರ್ಮಿಕ ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಘಟನೆಯಲ್ಲಿ ಇತರ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಪೊಲೀಸರು ಘಟನಾ ಸ್ಥಳಕ್ಕೆ ಬರುವ ಮುನ್ನವೇ ಹೊರಗಿನವರು ಪರಾರಿಯಾಗಿದ್ದಾರೆ. ಘಟನೆ ನಂತರ ವಿದ್ಯಾರ್ಥಿಗಳು ಮುಖ್ಯರಸ್ತೆಯಲ್ಲಿ ಧರಣಿ ನಡೆಸಿದರು.