ಫತೇಪುರದಲ್ಲಿ ಆಟೋ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ: ಹಲವು ಮಕ್ಕಳು ಸೇರಿದಂತೆ 9 ಮಂದಿ ದುರ್ಮರಣ
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಟೋ ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Published: 16th May 2023 09:37 PM | Last Updated: 16th May 2023 09:37 PM | A+A A-

ಅಪಘಾತದ ದೃಶ್ಯ
ಫತೇಪುರ್: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಟೋ ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋದಲ್ಲಿ 11 ಮಂದಿ ತೆರಳುತ್ತಿದ್ದರು. ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಆಟೋದಲ್ಲಿದ್ದವರು ಘಟಂಪುರದಿಂದ ಜೆಹಾನಾಬಾದ್ ಕಡೆಗೆ ಹೋಗುತ್ತಿದ್ದರು.
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಘಟಂಪುರದಿಂದ ಜೆಹನಾಬಾದ್‌ನಲ್ಲಿರುವ ಸಂಬಂಧಿಕರ ಸ್ಥಳಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅನೇಕ ಗಾಯಾಳುಗಳನ್ನು ಕಾನ್ಪುರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಅಪಘಾತದ ಕುರಿತು ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಅಪಘಾತದ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಫತೇಪುರದಲ್ಲಿ ನಡೆದ ರಸ್ತೆ ಅಪಘಾತ ಅತ್ಯಂತ ದುಃಖಕರವಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಇನ್ನು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
PM @narendramodi has announced an ex-gratia of Rs. 2 lakh for the next of kin of each of those who lost their lives in the accident in Fatehpur. The injured would be given Rs. 50,000 each.
— PMO India (@PMOIndia) May 16, 2023
ಅಪಘಾತದ ಬಗ್ಗೆ ಸಿಎಂ ಸಂತಾಪ
ಫತೇಪುರ್ ಜಿಲ್ಲೆಯಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತೀವ್ರ ಸಂತಾಪ ತಿಳಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
ಅಪಘಾತದ ಬಳಿಕ ಟ್ಯಾಂಕರ್ ಚಾಲಕ ವಾಹನ ಸಮೇತ ಪರಾರಿ
ಈ ಅಪಘಾತದಲ್ಲಿ ಆಟೋದಲ್ಲಿದ್ದವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೋಗೆ ಡಿಕ್ಕಿ ಹೊಡೆದ ನಂತರ ಟ್ಯಾಂಕರ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಟ್ಯಾಂಕರ್ ಚಾಲಕನನ್ನು ಹುಡುಕುತ್ತಿದ್ದಾರೆ. ಅಪಘಾತದ ನಂತರ ರಸ್ತೆ ಜಾಮ್ ಆಗಿತ್ತು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಘಟನೆ ನಡೆದ ಸ್ಥಳದಿಂದ ಪೊಲೀಸರು ಎಲ್ಲರನ್ನು ಹೊರ ಕಳುಹಿಸಿದರು. ಇದಾದ ಬಳಿಕ ಗಾಯಾಳುಗಳು ಹಾಗೂ ಮೃತರನ್ನು ಹೊರ ತೆಗೆಯಲಾಯಿತು.