ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಕೊನೆಗೊಳಿಸಿವೆ: ಪ್ರಧಾನಿ ಮೋದಿ
ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳನ್ನು ಕೊನೆಗೊಳಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.
Published: 16th May 2023 12:43 PM | Last Updated: 16th May 2023 01:11 PM | A+A A-

ಪ್ರಧಾನಿ ಮೋದಿ
ನವದೆಹಲಿ: ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳನ್ನು ಕೊನೆಗೊಳಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.
ಕೇಂದ್ರ ಸರ್ಕಾರದ ‘ರೋಜ್ಗಾರ್ ಮೇಳ’ದ ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 71 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಫಲಿತಾಂಶ ಪ್ರಕಟಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. ಈ ಬದಲಾವಣೆಗಳು ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವನ್ನು ಕೊನೆಗೊಳಿಸಿದೆ ಎಂದು ಹೇಳಿದರು.
ಅಲ್ಲದೆ, ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಆಡಳಿತದಿಂದ ಸೃಷ್ಟಿಯಾದ ಉದ್ಯೋಗಾವಕಾಶಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಮೋದಿಯವರು ವಿವರಿಸಿದರು.
ಕಳೆದ ಒಂಬತ್ತು ವರ್ಷಗಳಲ್ಲಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವತ್ತ ಹೆಚ್ಚಿನ ಗಮನವನ್ನು ನೀಡಲಾಗಿದೆ. ಆಧುನಿಕ ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿಯ ನಿರ್ಮಾಣ ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆ ಮತ್ತು ನೀತಿಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನ್ಯಾಯಯುತವಾಗಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: ರೋಜ್‌ಗಾರ್ ಮೇಳ: 71 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
ನೇಮಕಾತಿಗೆ ಅರ್ಜಿ ಸಲ್ಲಿಸುವುದರಿಂದ ಫಲಿತಾಂಶಗಳನ್ನು ಪಡೆಯುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಲಾಗಿದೆ. ಇದರಿಂದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಸಾಧ್ಯತೆಗಳು ಕೊನೆಗೊಂಡಿವೆ ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಶ್ಲಾಘಿಸಿದ ಅವರು, ಇದು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
"ಭಾರತ ಸರ್ಕಾರದ ಪ್ರತಿಯೊಂದು ಯೋಜನೆಗಳು, ಪ್ರತಿಯೊಂದು ನೀತಿಯು ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು. ಬಳಿಕ ನೇಮಕಾತಿ ಪತ್ರ ಪಡೆದ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳನ್ನು ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದರು.
"ಕಳೆದ ಒಂಬತ್ತು ವರ್ಷಗಳಲ್ಲಿ ಉದ್ಯೋಗಗಳ ಸ್ವರೂಪವೂ ಬಹಳ ವೇಗವಾಗಿ ಬದಲಾಗಿದೆ. ಬದಲಾಗುತ್ತಿರುವ ಈ ಪರಿಸ್ಥಿತಿಗಳಲ್ಲಿ ಯುವಜನರಿಗೆ ಹೊಸ ಕ್ಷೇತ್ರಗಳು ಹುಟ್ಟಿಕೊಂಡಿವೆ. ಕೇಂದ್ರ ಸರ್ಕಾರವು ಈ ಹೊಸ ಕ್ಷೇತ್ರಗಳಿಗೂ ನಿರಂತರವಾಗಿ ಬೆಂಬಲ ನೀಡುತ್ತಿದೆ. ಈ ಒಂಬತ್ತು ವರ್ಷಗಳಲ್ಲಿವ ಬದಲಾವಣೆಗಳಿದೆ ದೇಶ ಸಾಕ್ಷಿಯಾಗಿದೆ. ಸ್ಟಾರ್ಟ್-ಅಪ್ ಸಂಸ್ಕೃತಿಯಲ್ಲಿ ಹೊಸ ಕ್ರಾಂತಿಯಾಗಿದೆ. ಒಂಬತ್ತು ವರ್ಷಗಳ ಹಿಂದೆ ದೇಶದಲ್ಲಿ ಸುಮಾರು 100 ಸ್ಟಾರ್ಟಪ್‌ಗಳಿದ್ದವುಯ ಆದರೆ. ಇಂದು ಅದರ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ. ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗಳು ಮತ್ತು ದೇಶದಿಂದ ದಾಖಲೆಯ ರಫ್ತುಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಹೊಸ ಕ್ಷೇತ್ರಗಳಿಗೆ ಸತತವಾಗಿ ಬೆಂಬಲ ನೀಡುತ್ತಿದೆ.
2014 ರ ಮೊದಲು, ದೇಶದ ಗ್ರಾಮೀಣ ರಸ್ತೆ ಸಂಪರ್ಕವು 4 ಲಕ್ಷ ಕಿಲೋಮೀಟರ್‌ಗಳಿಗಿಂತ ಕಡಿಮೆಯಿತ್ತು, ನಂತರ ಅದನ್ನು 7.25 ಲಕ್ಷಕ್ಕೆ ಹೆಚ್ಚಿಸಲಾಯಿತು. 2014ಕ್ಕೂ ಮೊದಲು ದೇಶದಲ್ಲಿ 74 ವಿಮಾನ ನಿಲ್ದಾಣಗಳು ಮಾತ್ರ ಇತ್ತು. ಈ ಸಂಖ್ಯೆ ಇದೀಗ 150ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ವಾಲ್‌ಮಾರ್ಟ್‌ನ ಸಿಇಒ ಅವರನ್ನು ಭೇಟಿ ಮಾಡಿದೆ. ಅವರು ತಮ್ಮ ಕಂಪನಿಯು ಮುಂದಿನ 3-4 ವರ್ಷಗಳಲ್ಲಿ 80,000 ಕೋಟಿ ರೂಪಾಯಿಗಳ ರಫ್ತು ಮಾಡಲಿದೆ ಎಂದು ಹೇಳಿದರು. ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ವಲಯದಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದು ಬಹು ದೊಡ್ಡ ಸುದ್ದಿಯಾಗಿದೆ. ಸಿಸ್ಕೊ 8,000 ಕೋಟಿ ಮೌಲ್ಯದ ಮೇಡ್-ಇನ್-ಇಂಡಿಯಾ ಉತ್ಪನ್ನಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ಸಿಇಒ ಹೇಳಿದರು. ಮುಂದಿನ ವಾರ ದೊಡ್ಡ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರೆಲ್ಲರೂ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ನೂತನ ನೇಮಕಗೊಂಡ ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ರೋಜ್‌ಗಾರ್ ಮೇಳವು ಯುವಜನರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಬಲಪಡಿಸುವ ಸರ್ಕಾರದ ಪ್ರಯತ್ನವಾಗಿದೆ. ಇಂತಹ ರೋಜಗಾರ್ ಮೇಳವು ಯುವಜನರ ಬಗ್ಗೆ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ ಎಂದರು.