ತುಳಜಾ ಭವಾನಿ ದೇವಸ್ಥಾನ: ಹಾಫ್ ಪ್ಯಾಂಟ್, ಅಸಭ್ಯ ಬಟ್ಟೆ ಧರಿಸಿ ಬರುವ ಭಕ್ತರಿಗೆ ಪ್ರವೇಶ ನಿಷಿದ್ಧ
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ತುಳಜಾ ಭವಾನಿ ದೇವಸ್ಥಾನದ ಆಡಳಿತವು ಅರ್ಧ ಪ್ಯಾಂಟ್ ಅಥವಾ 'ಅಸಭ್ಯ' ಬಟ್ಟೆಗಳನ್ನು ಧರಿಸಿರುವ ಜನರ ಪ್ರವೇಶವನ್ನು ನಿಷೇಧಿಸಿದೆ ಎಂದು ಆಡಳಿತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Published: 18th May 2023 04:23 PM | Last Updated: 18th May 2023 04:23 PM | A+A A-

ಪ್ರಾತಿನಿಧಿಕ ಚಿತ್ರ
ಔರಂಗಾಬಾದ್: ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ತುಳಜಾ ಭವಾನಿ ದೇವಸ್ಥಾನದ ಆಡಳಿತವು ಅರ್ಧ ಪ್ಯಾಂಟ್ ಅಥವಾ 'ಅಸಭ್ಯ' ಬಟ್ಟೆಗಳನ್ನು ಧರಿಸಿರುವ ಜನರ ಪ್ರವೇಶವನ್ನು ನಿಷೇಧಿಸಿದೆ ಎಂದು ಆಡಳಿತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಧಾರ್ಮಿಕ ಸ್ಥಳದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಒಸ್ಮಾನಾಬಾದ್‌ನ ತುಳಜಾಪುರದಲ್ಲಿರುವ ತುಳಜಾ ಭವಾನಿ ದೇವಿಯ ಪ್ರಸಿದ್ಧ ದೇವಾಲಯಕ್ಕೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.
'ದೇವಸ್ಥಾನದ ಆಡಳಿತ ಮಂಡಳಿಯು ಮರಾಠಿ ಭಾಷೆಯಲ್ಲಿ ಬೋರ್ಡ್‌ಗಳನ್ನು ಹಾಕಿದ್ದು, 'ಅಶಿಸ್ತಿನ ಉಡುಗೆ, ಅಸಭ್ಯ ಉಡುಪುಗಳು ಮತ್ತು ದೇಹದ ಭಾಗಗಳನ್ನು ಪ್ರದರ್ಶಿಸುವವರಿಗೆ, ಹಾಫ್ ಪ್ಯಾಂಟ್ ಮತ್ತು ಬರ್ಮುಡಾ (ಶಾರ್ಟ್ಸ್) ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ.ದಯವಿಟ್ಟು ಭಾರತೀಯ ಸಂಸ್ಕೃತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ' ಎಂದಿದೆ.
ದೇವಸ್ಥಾನ ಆಡಳಿತದ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗೇಶ ಶಿತೋಳೆ ಅವರು ಪಿಟಿಐ ಜೊತೆಗೆ ಮಾತನಾಡಿ, 'ಈ ಬೋರ್ಡ್‌ಗಳನ್ನು ಇಂದು ಪ್ರದರ್ಶಿಸಲಾಗಿದೆ. ನಾವು ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಹಾಗಾಗಿ ಅದರ ಪಾವಿತ್ರ್ಯತೆ ಕಾಪಾಡಲು ತುಳಜಾ ಭವಾನಿ ದೇವಸ್ಥಾನದ ಪ್ರವೇಶಕ್ಕೆ ಬೋರ್ಡ್‌ಗಳನ್ನು ಹಾಕಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಯುಪಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಪ್ರವೇಶ ನಿಷೇಧ, ಹಿಂದೂಗಳಿಗೆ ಡ್ರೆಸ್ ಕೋಡ್!
ಇಂತಹ ನಿಯಮಗಳು ಈಗಾಗಲೇ ದೇಶದಾದ್ಯಂತ ಅನೇಕ ದೇವಾಲಯಗಳಲ್ಲಿ ಅಸ್ತಿತ್ವದಲ್ಲಿವೆ.
ತುಳಜಾ ಭವಾನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಸೊಲ್ಲಾಪುರದಿಂದ ಬಂದಿದ್ದ ಭಕ್ತೆ ಪ್ರತಿಭಾ ಮಹೇಶ ಜಗದಾಳೆ ಈ ನಿರ್ಣಯವನ್ನು ಬೆಂಬಲಿಸಿದರು. 'ಈ ನಿರ್ಧಾರವು ನಮ್ಮ ಸಂಸ್ಕೃತಿಯನ್ನು ಉಳಿಸಲು ಸಹಾಯ ಮಾಡುತ್ತದೆ. ನಾನು ಅದನ್ನು ಸ್ವಾಗತಿಸುತ್ತೇನೆ' ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಕೇಳಿದಾಗ ಅವರು ಸುದ್ದಿಗಾರರಿಗೆ ತಿಳಿಸಿದರು.