ಉತ್ತರ ಪ್ರದೇಶ: ನಾಲ್ವರು ಯುವಕರಿಂದ ಮಹಿಳೆ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರ
ಉತ್ತರ ಪ್ರದೇಶದ ಬಾಗ್‌ಪತ್ ನಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಗ್ರಾಮದ ನಾಲ್ವರು ಯುವಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Published: 19th May 2023 05:14 PM | Last Updated: 19th May 2023 08:14 PM | A+A A-

ಸಾಂದರ್ಭಿಕ ಚಿತ್ರ
ಬಾಗ್‌ಪತ್: ಉತ್ತರ ಪ್ರದೇಶದ ಬಾಗ್‌ಪತ್ ನಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಗ್ರಾಮದ ನಾಲ್ವರು ಯುವಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸರ್ಕಾರಿ ನೌಕರಿ ಬಯಸುತ್ತಿದ್ದ ಸಂತ್ರಸ್ತ ಮಹಿಳೆಗೆ ಆರೋಪಿಗಳು ಸಹಾಯ ಮಾಡುವ ಭರವಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 14 ರಂದು ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಹತ್ತು ದಿನಗಳ ನಂತರ, ಆರೋಪಿಗಳಾದ ಸೌರಭ್, ಕಮಲ್, ಶುಭಂ ಮತ್ತು ಸಾಗರ್ ಎಂಬ ನಾಲ್ವರು ನನ್ನ ಮನೆಗೆ ಬಂದು ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯ ಕುಡಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ವಿಚ್ಛೇದಿತ ಮಹಿಳೆ ತನ್ನ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಜ್ಞಾಹೀನಳಾಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಡೀ ಘಟನೆಯನ್ನು ಯುವಕರು ಚಿತ್ರೀಕರಿಸಿದ್ದಾರೆ. ನಂತರ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಪಶ್ಚಿಮ ಬಂಗಾಳ: ಬಾಂಗ್ಲಾದೇಶಿ ವಿದ್ಯಾರ್ಥಿನಿ ಮೇಲೆ ಪ್ರಾಧ್ಯಾಪಕನಿಂದ ಅತ್ಯಾಚಾರ
ಆಕೆಯ ಪರಿಸ್ಥಿತಿಯನ್ನು ಬಳಸಿಕೊಂಡ ಯುವಕರು ಮಹಿಳೆ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಮತ್ತು ಮಹಿಳೆ ವಿರೋಧಿಸಿದಾಗಲೆಲ್ಲಾ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಎಲ್ಲರೂ 20 ರಿಂದ 26 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.