ನ್ಯಾಯಯುತ ತನಿಖೆಯಿಂದ ಮಾತ್ರ ಸತ್ಯ ಬಯಲಾಗುತ್ತದೆ: ಚಲಾವಣೆಯಿಂದ 2000 ರೂ. ನೋಟು ಹಿಂಪಡೆದ ಬಗ್ಗೆ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, 2016ರಲ್ಲಿ ನೋಟು ಅಮಾನ್ಯೀಕರಣ ಆರ್ಥಿಕತೆಗೆ ಆಳವಾದ ಗಾಯವನ್ನು ಉಂಟುಮಾಡಿದೆ ಮತ್ತು ನ್ಯಾಯಯುತ ತನಿಖೆ ಮಾತ್ರ ಸತ್ಯವನ್ನು ಬಹಿರಂಗಪಡಿಸಲಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, 2016ರಲ್ಲಿ ನೋಟು ಅಮಾನ್ಯೀಕರಣ ಆರ್ಥಿಕತೆಗೆ ಆಳವಾದ ಗಾಯವನ್ನು ಉಂಟುಮಾಡಿದೆ ಮತ್ತು ನ್ಯಾಯಯುತ ತನಿಖೆ ಮಾತ್ರ ಸತ್ಯವನ್ನು ಬಹಿರಂಗಪಡಿಸಲಿದೆ ಎಂದರು.

2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣವನ್ನು ಜಾರಿಗೊಳಿಸುವ ನಿರ್ಧಾರ ಮತ್ತು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಶುಕ್ರವಾರದ ನಿರ್ಧಾರದ ಬಗ್ಗೆ ಸರ್ಕಾರವನ್ನು ಗುರಿಯಾಗಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, 'ನೀವು ಮೊದಲ ನೋಟು ಅಮಾನ್ಯೀಕರಣದಿಂದ ಆರ್ಥಿಕತೆಗೆ ಆಳವಾದ ಗಾಯವನ್ನು ಉಂಟುಮಾಡಿದ್ದೀರಿ. ಇದರಿಂದಾಗಿ ಅಸಂಘಟಿತ ವಲಯ ಸಂಪೂರ್ಣ ನಾಶವಾಯಿತು. ಎಂಎಸ್‌ಎಂಇಗಳು ಸ್ಥಗಿತಗೊಂಡವು ಮತ್ತು ಕೋಟಿಗಟ್ಟಲೆ ಉದ್ಯೋಗಗಳು ನಷ್ಟವಾಗಿವೆ' ಎಂದು ದೂರಿದ್ದಾರೆ.

'ಈಗ 2000 ರೂಪಾಯಿ ನೋಟಿನ ಮೇಲೆ 'ಎರಡನೇ ನೋಟು ಅಮಾನ್ಯೀಕರಣ'... ಮಾಡುತ್ತಿರುವುದು ತಮ್ಮ ತಪ್ಪು ನಿರ್ಧಾರವನ್ನು ಮುಚ್ಚಿಕೊಳ್ಳಲೆಂದಾ? ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲಿದೆ' ಎಂದು ಖರ್ಗೆ ಹೇಳಿದ್ದಾರೆ.

2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಶುಕ್ರವಾರ ತಿಳಿಸಿದೆ. ಆದರೆ, ಅದು ಸೆಪ್ಟೆಂಬರ್ 30ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8 ರಂದು ತಮ್ಮ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಕಟಿಸಿದರು ಮತ್ತು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು.

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com