ನವದೆಹಲಿ: ಸಂಸತ್ ಭವನ ಉದ್ಘಾಟನೆಗೆ ಕೇವಲ ಒಂದು ವಾರ ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ ಬದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮೇ 28 ರಂದು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿದೆ.
'ಭಾರತದ ಮಹಾನ್ ಪುತ್ರ ವಿನಾಯಕ ದಾಮೋದರ್ ಸಾವರ್ಕರ್ ಅವರ 140ನೇ ಜನ್ಮದಿನವಾದ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ' ಎಂದು ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.
ವೀರ್ ಸಾವರ್ಕರ್ ಅವರು 1883ರ ಮೇ 28ರಂದು ಭಾಗೂರಿನಲ್ಲಿ ಜನಿಸಿದರು. ಹೊಸ ಸಂಸತ್ತು ಕನಿಷ್ಠ 150 ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯದ, ಸಂಸತ್ ಕಟ್ಟಡ 100 ವರ್ಷಗಳಿಗೆ ಬಾಳಿಕೆ ಬರುತ್ತದೆ ಎಂದು ಅವರು ಹೇಳಿದರು.
64,500 ಚದರ ಮೀಟರ್ ವಿಸ್ತೀರ್ಣದ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ನೂತನ ಸಂಸತ್ತಿನ ಕಟ್ಟಡವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಹೊಸ ಸಂಸತ್ ಭವನವನ್ನು ಮೋದಿಯವರ ಪ್ರತಿಷ್ಠೆಯ ಯೋಜನೆ ಎಂದು ಕಾಂಗ್ರೆಸ್ ಹೇಳಿದೆ.
ಇದಕ್ಕೂ ಮೊದಲು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, 'ನಮ್ಮ ಎಲ್ಲಾ ಸಂಸ್ಥಾಪಕ ಪಿತಾಮಹರಿಗೆ ಮತ್ತು ತಾಯಂದಿರಿಗೆ ಸಂಪೂರ್ಣ ಅವಮಾನ ಮಾಡಲಾಗಿದೆ. ಗಾಂಧಿ, ನೆಹರು, ಪಟೇಲ್, ಬೋಸ್, ಡಾ. ಅಂಬೇಡ್ಕರ್ ಮತ್ತು ಇತರರನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ' ಎಂದಿದ್ದಾರೆ.
ತ್ರಿಕೋನ ಆಕಾರದ ಕಟ್ಟಡದ ನಿರ್ಮಾಣವು 2021ರ ಜನವರಿ 15 ರಂದು ಪ್ರಾರಂಭವಾಯಿತು ಮತ್ತು ಆಗಸ್ಟ್ 2022 ರೊಳಗೆ ಪೂರ್ಣಗೊಳ್ಳಬೇಕಿತ್ತು. 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಹೊಸ ಕಟ್ಟಡವು 1,224 ಸಂಸದರನ್ನು ಹೊಂದುವ ಸಾಮರ್ಥ್ಯ ಹೊಂದಿದ್ದು, ನಾಲ್ಕು ಅಂತಸ್ತಿನ ರಚನೆಯಾಗಿದೆ.
ಇದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೊಠಡಿಗಳನ್ನು ಹೊಂದಿದೆ. ಟಾಟಾ ಪ್ರಾಜೆಕ್ಟ್ಸ್ 970 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದೆ.
Advertisement