ಮೋದಿ ಕುರಿತು ಬಿಬಿಸಿ ಸಾಕ್ಷ್ಯಚಿತ್ರ, ಮಾನನಷ್ಟ ಪ್ರಕರಣದಲ್ಲಿ ಬಿಬಿಸಿಗೆ ದೆಹಲಿ ಕೋರ್ಟ್ ಸಮನ್ಸ್‌ ಜಾರಿ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರ ವಿವಾದ ಸಂಬಂಧ ದಾಖಲಾಗಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಸಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಸಮನ್ಸ್‌ ಜಾರಿ ಮಾಡಿದೆ.
ಬಿಬಿಸಿ
ಬಿಬಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರ ವಿವಾದ ಸಂಬಂಧ ದಾಖಲಾಗಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಸಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಸಮನ್ಸ್‌ ಜಾರಿ ಮಾಡಿದೆ.

ಜಸ್ಟಿಸ್ ಆನ್ ಟ್ರಯಲ್ ಎಂಬ ಗುಜರಾತ್ ಮೂಲದ ಎನ್‌ಜಿಒ ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಸಮನ್ಸ್ ಅವರು ಸಮನ್ಸ್‌ ಜಾರಿಗೊಳಿಸಿ ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಿದ್ದಾರೆ. 

2002ರ ಗುಜರಾತ್ ದಂಗೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಪ್ರಶ್ನಿಸಿ ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಪ್ರಕರಣ ದಾಖಲಿಸಲಾಗಿತ್ತು. ಇದೀಗ ದೆಹಲಿ ಹೈಕೋರ್ಟ್‌ ಬ್ರಿಟನ್‌ನ ಬಿಬಿಸಿ ಸಂಸ್ಥೆಗೆ ಸಮನ್ಸ್‌ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಈ ಸಾಕ್ಷ್ಯಚಿತ್ರವು ಮಾನಹಾನಿಕರವಾದ ಆರೋಪವನ್ನು ಮಾಡುತ್ತದೆ. ದೇಶ ಮತ್ತು ನ್ಯಾಯಾಂಗದ ಪ್ರತಿಷ್ಠೆಯ ಮೇಲೆ ಮತ್ತು ಪ್ರಧಾನ ಮಂತ್ರಿಯ ವಿರುದ್ಧ ನಿಂದನೆಗಳನ್ನು ಮಾಡುತ್ತದೆ ಎಂದು ವಾದಿಸಲಾಗಿದೆ. ಹೀಗಾಗಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಕೋರ್ಟ್‌ ತಿಳಿಸಿದೆ. ಎನ್‌ಜಿಒ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಎರಡು ಭಾಗಗಳಲ್ಲಿರುವ ಸಾಕ್ಷ್ಯಚಿತ್ರವು ನ್ಯಾಯಾಂಗ ಸೇರಿದಂತೆ ದೇಶವನ್ನು ದೂಷಿಸಿದೆ ಎಂದು ಅವರು ಪ್ರತಿಪಾದಿಸಿದರು.

ಇತ್ತೀಚೆಗೆ ಇಲ್ಲಿನ ವಿಚಾರಣಾ ನ್ಯಾಯಾಲಯವು ಬಿಬಿಸಿ, ವಿಕಿಮೀಡಿಯಾ ಫೌಂಡೇಶನ್ ಮತ್ತು ಇಂಟರ್ನೆಟ್ ಆರ್ಕೈವ್‌ಗೆ ಸಮನ್ಸ್‌ ನೀಡಿತ್ತು. ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಚಿತ್ರ ಪ್ರಕಟಿಸದಂತೆ ತಡೆಯಬೇಕೆಂದು ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ಮಾಡಿದ ಬಳಿಕ ವಿಚಾರಣಾ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿತ್ತು.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಗಲಭೆಯನ್ನು ಹತ್ತಿಕ್ಕುವಲ್ಲಿ ಮೋದಿ ನಿರ್ವಹಿಸಿದ್ದ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಬಿಬಿಸಿಯ ಸಾಕ್ಷ್ಯಚಿತ್ರದಲ್ಲಿ ಆರೋಪಿಸಲಾಗಿತ್ತು. ಬಿಬಿಸಿಯ ಎರಡು ಭಾಗಗಳ ಈ ಸರಣಿಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com