ದೆಹಲಿ ಸೇವಾ ಸುಗ್ರೀವಾಜ್ಞೆ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ ಕೇಜ್ರಿವಾಲ್
‘ಸುಪ್ರೀಂ ಕೋರ್ಟ್ ತೀರ್ಪನ್ನೂ ನಿರ್ಲಕ್ಷಿಸಿ ಲೆಫ್ಟಿನೆಂಟ್ ಗವರ್ನರ್‌ಗೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂದಿ ಅವರನ್ನು ಭೇಟಿ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮಯ ಕೋರಿದ್ದಾರೆ.
Published: 26th May 2023 12:16 PM | Last Updated: 26th May 2023 12:21 PM | A+A A-

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ‘ಸುಪ್ರೀಂ ಕೋರ್ಟ್ ತೀರ್ಪನ್ನೂ ನಿರ್ಲಕ್ಷಿಸಿ ಲೆಫ್ಟಿನೆಂಟ್ ಗವರ್ನರ್‌ಗೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂದಿ ಅವರನ್ನು ಭೇಟಿ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮಯ ಕೋರಿದ್ದಾರೆ.
ಮೇ 19ರಂದು ರಾಜಧಾನಿ ನವದೆಹಲಿಯಲ್ಲಿ ಗ್ರೂಪ್ ಎ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಪ್ರಕ್ರಿಯೆ ಉಸ್ತುವಾರಿಗಾಗಿ ‘ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ’ವನ್ನು ರಚಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರದ ಈ ಕ್ರಮವನ್ನು ಎಎಪಿ ಸರ್ಕಾರ 'ವಂಚನೆ' ಎಂದು ಕರೆದಿತ್ತು.
Sought time this morning to meet Cong President Sh Kharge ji and Sh Rahul Gandhi ji to seek Cong support in Parl against undemocratic n unconstitutional ordinance passed by BJP govt and also to discuss general assault on federal structure and prevailing political situation
— Arvind Kejriwal (@ArvindKejriwal) May 26, 2023
'ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪ್ರಜಾಸತ್ತಾತ್ಮಕವಲ್ಲದ ಮತ್ತು ಅಸಂವಿಧಾನಿಕ ಸುಗ್ರೀವಾಜ್ಞೆಯ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು, ಫೆಡರಲ್ ರಚನೆ ಮತ್ತು ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯ ಮೇಲಿನ ದಾಳಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಜಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ಸಮಯ ಕೋರಲಾಗಿದೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ವಿಶೇಷ ಕಾನೂನು: ದೆಹಲಿ ಆಡಳಿತಾತ್ಮಕ ನಿರ್ಧಾರಕ್ಕೆ ಪ್ರಾಧಿಕಾರ, ಲೆ.ಗೌರ್ನರ್ ತೀರ್ಮಾನ ಅಂತಿಮ!
ಸಾರ್ವಜನಿಕ ಭದ್ರತೆ, ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಭೂಮಿಯ ವಿಷಯಗಳನ್ನು ಹೊರತುಪಡಿಸಿ ದೆಹಲಿ ಸರ್ಕಾರವು ಇತರೆಲ್ಲ ಸೇವೆಗಳಿಗೆ ಸಂಬಂಧಿಸಿದ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ವಾರದ ನಂತರ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿದೆ.
ಮೇ 11ರ ಉನ್ನತ ನ್ಯಾಯಾಲಯದ ತೀರ್ಪಿಗೆ ಮೊದಲು ದೆಹಲಿ ಸರ್ಕಾರದ ಎಲ್ಲಾ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಳು ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯನಿರ್ವಾಹಕ ನಿಯಂತ್ರಣದಲ್ಲಿತ್ತು.
ಎಎಪಿಯ ರಾಷ್ಟ್ರೀಯ ಸಂಚಾಲಕರಾಗಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ದೆಹಲಿ ಸೇವೆಗಳ ವಿಷಯದಲ್ಲಿ ಎನ್‌ಸಿಪಿ, ಶಿವಸೇನೆ (ಯುಬಿಟಿ) ಮತ್ತು ಟಿಎಂಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೆಂಬಲವನ್ನು ಕೋರಿದ್ದಾರೆ.
ಇದನ್ನೂ ಓದಿ: ಕೇಂದ್ರದ 'ಅಸಂವಿಧಾನಿಕ' ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ: ಕೇಜ್ರಿವಾಲ್
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠವು, ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರವು ಆಡಳಿತಾತ್ಮಕ ವಿಷಯಗಳ ಮೇಲೆ ನಿಯಂತ್ರಣ ಹೊಂದಿರಬೇಕು. ದೆಹಲಿ ಕೇಂದ್ರಾಡಳಿತ ಪ್ರದೇಶ ವಿಶೇಷ ಅಗತ್ಯತೆಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.