ಲೋಕಸಭೆ ಚುನಾವಣೆ: 22 ಸ್ಥಾನಗಳಿಗೆ ಬೇಡಿಕೆ ಇಟ್ಟ ಶಿಂಧೆ ನೇತೃತ್ವದ ಶಿವಸೇನೆ
2024ರ ಲೋಕಸಭೆ ಚುನಾವಣೆಗೆ ಹಲವು ರಾಜಕೀಯ ಪಕ್ಷಗಳು ಈಗಲೇ ಸಿದ್ಧತೆ ಆರಂಭಿಸಿದ್ದು, ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
Published: 26th May 2023 10:05 PM | Last Updated: 26th May 2023 10:05 PM | A+A A-

ಏಕನಾಥ್ ಶಿಂಧೆ
ಮುಂಬೈ: 2024ರ ಲೋಕಸಭೆ ಚುನಾವಣೆಗೆ ಹಲವು ರಾಜಕೀಯ ಪಕ್ಷಗಳು ಈಗಲೇ ಸಿದ್ಧತೆ ಆರಂಭಿಸಿದ್ದು, ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಬಿಜೆಪಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿರುವ ಶಿಂಧೆ ಬಣದ ಶಿವಸೇನೆ ಸಂಸದ ಗಜಾನನ ಕೀರ್ತಿಕರ್ ಅವರು, ಶಿಂಧೆ ನೇತೃತ್ವದ ಶಿವಸೇನೆ 41 ಶಾಸಕರು ಮತ್ತು 13 ಲೋಕಸಭಾ ಸಂಸದರನ್ನು ಹೊಂದಿದ್ದರೂ ಬಿಜೆಪಿಯಿಂದ ಇನ್ನೂ ಸರಿಯಾದ ಗೌರವ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಶಿವಸೇನೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಭಾಗವಾಗಿರಲಿಲ್ಲ. ಆದರೆ ಈಗ ನಾವು ಎನ್‌ಡಿಎ ಭಾಗವಾಗಿದ್ದೇವೆ. ಎನ್‌ಡಿಎ ಮೈತ್ರಿಕೂಟದ ಪಾಲುದಾರರಾಗಿ ನಮಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ಸಿಗಬೇಕು. ಬಿಜೆಪಿಯವರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ' ಎಂದು ಕೀರ್ತಿಕರ್ ಆರೋಪಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಬಿಜೆಪಿಯನ್ನು ತಿರಸ್ಕರಿಸಿ: ಶರದ್ ಪವಾರ್
2024ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಿಗೆ ಶಿವಸೇನೆ ಬೇಡಿಕೆ ಇಡಲಿದೆ ಎಂದು ಕೀರ್ತಿಕರ್ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ 22 ರಲ್ಲಿ 18 ಸ್ಥಾನಗಳನ್ನು ಗೆದ್ದಿದೆ ಎಂದು ಕೀರ್ತಿಕರ್ ಹೇಳಿದ್ದಾರೆ. 2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಕ್ರಮವಾಗಿ 26 ಮತ್ತು 22 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಬಾರಿಯೂ 22 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ನಮ್ಮ ಹಕ್ಕು ಎಂದು ಕೀರ್ತಿಕರ್ ಪ್ರತಿಪಾದಿಸಿದ್ದಾರೆ.
ಮತ್ತೊಂದೆಡೆ, 2024 ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ 22 ಸ್ಥಾನಗಳಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ನಾಯಕರು ನಿರಾಕರಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ನಿಜವಾದ ಶಕ್ತಿ ಏನೆಂಬುದು ಎಲ್ಲರಿಗೂ ತಿಳಿದಿದೆ. ಅವರು 22 ಸ್ಥಾನಗಳಿಗೆ ಬೇಡಿಕೆಯಿಡಬಹುದು. ಆದರೆ ಇದು ಅಸಾಧ್ಯ. ಏಕೆಂದರೆ ಶಿಂಧೆ ನೇತೃತ್ವದ ಶಿವಸೇನೆಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವದರಿಂದ ಯಾವುದೇ ಪೈಪೋಟಿ ಇಲ್ಲದೆ ಪ್ರತಿಪಕ್ಷಗಳ ಗೆಲುವುಗಿ ಕಾರಣವಾಗುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.